ನವದೆಹಲಿ: ಪ್ರಸ್ತುತ, ದೇಶದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಉದ್ಯಮಗಳು ಕರೋನಾ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿವೆ. ಏತನ್ಮಧ್ಯೆ, ಸಣ್ಣ ವ್ಯಾಪಾರಿಗಳಿಗೆ ಪರಿಹಾರದ ಸುದ್ದಿಯೊಂದು ಪ್ರಕಟಗೊಂಡಿದೆ. ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಂತಹ ಸಣ್ಣ ಉದ್ಯಮಿಗಳಿಗೆ ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಮಾಡಲು ಮುಂದಾಗಿದೆ. ಈ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗಾಗಿ ಎಸ್‌ಬಿಐ ಈಗ ನೂತನ ಸಾಲ ಯೋಜನೆಯನ್ನು ತರುತ್ತಿದೆ.


COMMERCIAL BREAK
SCROLL TO CONTINUE READING

10 ಸಾವಿರ ಕೋಟಿ ರೂ. ಸಾಲ ನೀಡಲಾಗುವುದು
ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ ಸಣ್ಣ ಉದ್ಯಮಿಗಳಿಗೆ 10 ಸಾವಿರ ಕೋಟಿ ರೂಪಾಯಿಗಳನ್ನು ಸಾಲದ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಮೊತ್ತವು ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳ (ಎಂಎಸ್‌ಎಂಇ) ಹಣದ ಕೊರತೆಯನ್ನು ನೀಗಿಸಲಿದ್ದು,  ಗಳಿಕೆಯನ್ನು ಹೆಚ್ಚಿಸಲು ಅವಕಾಶವನ್ನು ನೀಡಲಿದೆ. ಸಣ್ಣ ಉದ್ಯಮಿಗಳಿಗೆ ಸಹಾಯ ನೀಡುವ ಕುರಿತು ಹೇಳಿಕೆ ನೀಡಿರುವ ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು, 'ನಾವು ಕೆಲವು ದಿನಗಳ ಹಿಂದೆ ಸಣ್ಣ ಉದ್ಯಮಿಗಳಿಗಾಗಿ ಚಿನ್ನದ ಸಾಲ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಅದರ ಮೂಲಕ ಒಂದು ತಿಂಗಳಲ್ಲಿ 88 ಕೋಟಿ ರೂಪಾಯಿಗಳನ್ನು ವ್ಯಾಪಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಮತ್ತಷ್ಟು ಮುಂದುವರಿಸಲು ನಾವು ಯೋಚಿಸುತ್ತಿದ್ದೇವೆ ' ಎಂದು ಹೇಳಿದ್ದಾರೆ.


ಸಣ್ಣ ಉದ್ಯಮಿಗಳನ್ನು ಸ್ವಾವಲಂಭಿಸುವ್ಬತ್ತ ಹೆಜ್ಜೆ
ಸ್ವಾವಲಂಬಿ ಭಾರತ ಪ್ಯಾಕೇಜ್‌ ಅಡಿ ಒಟ್ಟು 20 ಲಕ್ಷ 97 ಸಾವಿರ ಕೋಟಿ ರೂ. ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೇ ತಿಂಗಳಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ನಿಧಿಯಿಂದ 50,000 ಕೋಟಿ ರೂ.ಗಳನ್ನು ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ (ಎಂಎಸ್‌ಎಂಇ) ನೀಡುವುದಾಗಿ ಭರವಸೆ ನೀಡಿದ್ದರು. ಉದ್ಯಮಿಗಳು ಕೂಡ ಸರ್ಕಾರದ ಸಹಾಯಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು. ಹೀಗಾಗಿ ಪ್ರಸ್ತುತ ಈ ನಿಧಿಯಿಂದ 10,000 ಕೋಟಿ ರೂ. ಶೀಘ್ರವೇ ಬಿಡುಗಡೆಯಾಗಲಿದ್ದು, ಉದ್ಯಮಿಗಳ ಹಣದ ಕೊರತೆ ಇದರಿಂದ ನೀಗಲಿದೆ.


ಇದರಿಂದ ಯಾವ ಉದ್ಯಮಗಳಿಗೆ ಲಾಭ ಉಂಟಾಗಲಿದೆ?
ಸರ್ಕಾರವು ನೀಡುತ್ತಿರುವ ಈ ಹಣಕಾಸಿನ ನೆರವು ನೂತನವಾಗಿ ಆರಂಭಗೊಂಡ ಉದ್ಯಮಗಳಿಗೆ ಲಾಭ ನೀಡಲಿದೆ. ಈ ಉದ್ಯಮಗಳ ವ್ಯವಹಾರವು ಆರಂಭಿಕ ಹಂತದಲ್ಲಿರುವ ಕಾರಣ  ಮತ್ತಷ್ಟು ಬೆಳೆಯುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಹಣ ಸಂಗ್ರಹಣೆಗಾಗಿ ಅವರ ಬಳಿ ವೃತ್ತಿಪರರು ಅಥವಾ ದೊಡ್ಡ ಕಂಪನಿಗಳಂತಹ ಬಂಡವಾಳಶಾಹಿಗಳು ಇರುವುದಿಲ್ಲ. ಈ ಯೋಜನೆಯನ್ನು ಘೋಷಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 'ಇದರಿಂದ  ಸಣ್ಣ ಕಂಪನಿಗಳ ಗಾತ್ರ ಮತ್ತು ಸಾಮರ್ಥ್ಯ ಹೆಚ್ಚಾಗಲಿದ್ದು, ಷೇರು ವಿನಿಮಯ ಕೇಂದ್ರಗಳ  ಪಟ್ಟಿಯಲ್ಲಿಯೂ ಸಹ ಸೇರ್ಪಡೆಯಾಗಲು ಇದು ಪ್ರೋತ್ಸಾಹಿಸಲಿದೆ' ಎಂದು ಹೇಳಿದ್ದರು. ಕರೋನಾ ಬಿಕ್ಕಟ್ಟಿನಲ್ಲಿರುವ ಸಣ್ಣ ಉದ್ಯಮಿಗಳ ಸ್ವಾವಲಂಬಿ ಪ್ಯಾಕೇಜ್‌ನ ಮೊದಲ ಕಂತು ಬಿಡುಗಡೆಯಾಗುವುದರೊಂದಿಗೆ  ಆರ್ಥಿಕತೆಯು ಮತ್ತೆ ಚೇತರಿಸಿಕೊಳ್ಳುವ ಭರವಸೆ ಕೂಡ ಮೂಡಲಿದೆ.