ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತಂತೆ ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಶೀಘ್ರದಲ್ಲೇ ನಡೆಸಲು ಗುರುವಾರ ಸುಪ್ರೀಂಕೋರ್ಟ್ ಸಮ್ಮತಿಸಿದೆ.


COMMERCIAL BREAK
SCROLL TO CONTINUE READING

ಈ ಸಂಬಂಧ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಲು ವಿಶೇಷ ಬೆಂಚ್ ರಚಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.


ಫ್ರಾನ್ಸ್ ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಪ್ರಕರಣ ಕುರಿತು ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೇಂದ್ರದ ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ರಫೇಲ್ ಒಪ್ಪಂದದಲ್ಲಿ ಭಾರೀ ಅವ್ಯವಹಾರ ಮತ್ತು ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‍ಗಳು) ವಜಾಗೊಳಿಸಿದ ಡಿ.14ರ ತನ್ನ ತೀರ್ಪನ್ನು ಮರು ಪರಿಶೀಲಿಸುವಂತೆ ಅವರು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು.


ಸಿಎಜಿ ಸಂಸತ್ತಿಗೆ ಮೊದಲೇ ವರದಿ ಸಲ್ಲಿಸಿದೆ ಎನ್ನುವ ಮೂಲಕ ನ್ಯಾಯಾಲಯದ ದಾರಿ ತಪ್ಪಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲ ಪ್ರಶಾಂತ್ ಭೂಷಣ್ ಮನವಿ ಮಾಡಿದ್ದಾರೆ. ಇದಲ್ಲದೆ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಸಹ ತೀರ್ಪು ಮರುಪರಿಶೀಲನೆಗೆ ಮನವಿ ಮಾಡಿದ್ದಾರೆ.