ನವದೆಹಲಿ: ಎಲೆಕ್ಟ್ರೋಲ್ ಬಾಂಡ್​ಗಳ ದೇಣಿಗೆದಾರರ ವಿವರಗಳನ್ನು ಮೇ 30ರೊಳಗೆ ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ  ಸಲ್ಲಿಸುವಂತೆ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 


COMMERCIAL BREAK
SCROLL TO CONTINUE READING

ಚುನಾವಣಾ ಬಾಂಡ್​ ಸಂಬಂಧ ಮಧ್ಯಂತರ ತೀರ್ಪು ನೀಡಿರುವ ಸುಪ್ರೀಂಕೋರ್ಟ್​, ಮೇ 30ರೊಳಗೆ ಮುಚ್ಚಿದ ಲಕೋಟೆಯಲ್ಲಿ ದೇಣಿಗೆದಾರರ ವಿವರಗಳನ್ನು ನೀಡಬೇಕು. ಯಾವ ಯಾವ ರಾಜಕೀಯ ಪಕ್ಷಗಳು ಮೇ 15ರವರೆಗೆ ಯಾರಿಂದ ಎಷ್ಟೆಷ್ಟು ದೇಣಿಗೆಗಳನ್ನು ಸಂಗ್ರಹಿಸಿವೆ ಎಂಬ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಅಷ್ಟೇ ಅಲ್ಲದೆ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ವಿವರಗಳನ್ನೂ ಒದಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 


ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ, ಈ ವಿವಾದಕ್ಕೆ ವಿವರವಾದ ಮತ್ತು ದೀರ್ಘ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದೆ. 


ಎಲೆಕ್ಟೋರಲ್‌ ಬಾಂಡ್‌ ಯೋಜನೆಯ ಕುರಿತಾಗಿ ಕೆಲವೊಂದು ಆಕ್ಷೇಪಗಳನ್ನು ವ್ಯಕ್ತಪಡಿಸಿ  ಸರಕಾರೇತರ (ಎ.ಡಿ.ಆರ್‌.) ಸಂಘಟನೆಯಾದ 'ಪ್ರಜಾಪ್ರಭುತ್ವ ಸುಧಾರಣಾ ಸಂಘ' ಸುಪ್ರಿಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಒಂದೋ ಈ ಎಲೆಕ್ಟೋರಲ್‌ ಬಾಂಡ್‌ ಯೋಜನೆಗೆ ತಡೆ ನೀಡಬೇಕು ಅಥವಾ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರನ್ನು ಬಹಿರಂಗಪಡಿಸಲು ಯೋಜನೆಯಲ್ಲಿ ಅವಕಾಶವಿರಬೇಕು ಎಂದು ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದರು.


ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ್ದ ಸವೋಚ್ಛ ನ್ಯಾಯಾಲಯ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಾದವನ್ನು ಗುರುವಾರ ಆಲಿಸಿ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. 


2017ರ ಆಯ-ವ್ಯಯದಲ್ಲಿ ಪ್ರಧಾನಿ ನರೆಂದ್ರ ಮೋದಿ ನೇತೃತ್ವದ ಎನ್‌.ಡಿ.ಎ. ಸರ್ಕಾರ 'ಎಲೆಕ್ಟೋರಲ್‌ ಬಾಂಡ್‌ ಸ್ಕೀಂ' ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸಿತ್ತು.