ನವದೆಹಲಿ : ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನದಿ ನೀರು ನಿರ್ವಹಣೆ ಮಂಡಳಿ (ಸಿಎಂಬಿ) ರಚನೆಗೆ ಸ್ಕೀಂ ಸಿದ್ಧಪಡಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಇಂದಿಗೆ(ಮೇ 3) ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಲೇಬೇಕು ಎಂದು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶಿಸಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ ತಮಿಳುನಾಡಿಗೆ 4 ಟಿಎಂಸಿ ನೀರು ಬಿಡಲೇಬೇಕು ಎಂದು ಕರ್ನಾಟಕಕ್ಕೆ ಆದೇಶ ನೀಡಿದ್ದು, ಸ್ಕೀಂ ರಚನೆ ಕರಡು ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿದೆ. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಕೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದೆ. 



ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ಈಗಾಗಲೇ ಸ್ಕ್ರೀಂ ರಚನೆ ಸಂಬಂಧ ಕರಡು ರಚಿಸಲಾಗಿದ್ದು, ಕ್ಯಾಬಿನೆಟ್ ಅನುಮೋದನೆ ಪಡೆಯಬೇಕಿದೆ. ಆದರೆ, ಪ್ರಧಾನಿ ಮತ್ತು ಸಚಿವರು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿರುವುದರಿಂದ ಕರಡು ಅಂಗೀಕಾರವಾಗಿಲ್ಲ. ಹಾಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಳಂಬವಾಗಿದೆ ಎಂದು ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 10 ದಿನಗಳ ಕಾಲಾವಕಾಶ ನೀಡಿದೆ. 



ಫೆ. 16ರಂದು ಸುಪ್ರೀಂ ಕೋರ್ಟ್ ಪ್ರಕಟಿಸಿದ ಅಂತಿಮ ತೀರ್ಪಿನಲ್ಲಿ ನೀರು ಹಂಚಿಕೆಗೆ ಸ್ಕೀಂ ರಚಿಸಲು ಕೇಂದ್ರ ಸರ್ಕಾರಕ್ಕೆ ಆರು ವಾರಗಳ ಗಡುವು ನೀಡಿತ್ತು. ನಿಗದಿತ ಅವಧಿಯೊಳಗೆ ಸ್ಕೀಂ ರಚಿಸದ ಸರ್ಕಾರ, ಗಡುವು ಅಂತ್ಯವಾಗುವ ಕೊನೆಯ ದಿನವಾದ ಏ.9ಕ್ಕೆ ಸ್ಕೀಂ ರಚನೆಗೆ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ಕೋರುವುದರ ಜತೆಗೆ ಸ್ಕೀಂನ ವ್ಯಾಖ್ಯೆಯ ಬಗ್ಗೆ ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಗಡುವಿನೊಳಗೆ ಸ್ಕೀಂ ರಚನೆ ಮಾಡದ ಕೇಂದ್ರದ ವಿಳಂಬ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಮೇ 3ಕ್ಕೆ ಸ್ಕೀಂ ರಚನೆ ಮಾಡಲೇಬೇಕೆಂದು ಖಡಕ್‌ ಸೂಚನೆ ನೀಡಿತ್ತು.