ಮೇವು ಹಗರಣ: ಲಾಲೂ ಪ್ರಸಾದ್ ಯಾದವ್ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ
ಲಾಲೂ ಪ್ರಸಾದ್ ಯಾದವ್ ವೈದ್ಯಕೀಯ ನೆಪವೊಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾ ಮಾಡಿದೆ.
ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವುದಕ್ಕಾಗಿ ಲಾಲೂ ಪ್ರಸಾದ್ ಯಾದವ್ ವೈದ್ಯಕೀಯ ನೆಪವೊಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾ ಮಾಡಿದೆ.
ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಿಎಂ ಹಾಗೂ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರ್ಖಂಡ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ಸಂಬಂಧ ಸುಪ್ರೀಂಕೋರ್ಟಲ್ಲಿ ಲಾಲೂ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಏಪ್ರಿಲ್ 10ರಂದು ವಿಚಾರಣೆಗೆ ದಿನಾಂಕ ನಿಗದಿ ಮಾಡಿ, ಅಷ್ಟರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐ ಗೆ ಸೂಚನೆ ನೀಡಿತ್ತು.
ಅದರಂತೆ ಸಿಬಿಐ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ, ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಲಾಲೂ ಜಾಮೀನು ಅರ್ಜಿ ಸಲ್ಲಿಸಿರುವುದುದಾಗಿ ತಿಳಿಸಿ, ಜಾಮೀನು ನೀಡದಂತೆ ಮಂಗಳವಾರ ಮನವಿ ಮಾಡಿತ್ತು. ಈ ಅಂಶಗಳನ್ನು ಪರಿಗಣಿಸಿ ಇಂದು ಸುಪ್ರೀಂಕೋರ್ಟ್ ಲಾಲೂ ಪ್ರಸಾದ್ ಯಾದವ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.