ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ರಾಜಕೀಯವಾಗಿ ಸೂಕ್ಷ್ಮವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ವಿಚಾರಣೆಯನ್ನು ಇಂದು(ಜ.10) ರಂದು ನಡೆಸಲಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಇಂದು ನಡೆಸಲಾಗುವುದು. ನ್ಯಾಯಮೂರ್ತಿ ಎನ್.ಎ. ರಾಮನ್, ನ್ಯಾಯಮೂರ್ತಿ ಉದಯ ಯು.ಲಲಿತ್ ಮತ್ತು ನ್ಯಾಯಮೂರ್ತಿ ಧನಂಜಯ್ ವೈ ಚಂದ್ರಚೂಡ್, ಜಸ್ಟಿಸ್ ಎಸ್.ಎಸ್. ಬಾಬೆಡಿ, ಪಾಡಿ ಜಸ್ಟಿಸ್ ರಂಜನ್ ಗೊಗೊಯ್ ನೇತೃತ್ವದ ಸಾಂವಿಧಾನಿಕ ಪೀಠದಿಂದ ಈ ವಿಚಾರಣೆ ನಡೆಯಲಿದೆ.


COMMERCIAL BREAK
SCROLL TO CONTINUE READING

2010ರಲ್ಲಿ ಈ ವಿವಾದದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಈ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಈ ಮೂವರಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಾಕಷ್ಟು ಮೇಲ್ಮನವಿಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದವು. 


ಕಳೆದ ಎರಡು ದಶಕಗಳಿಂದ ಹಿಂದೂ-ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ವಿವಾದದ ಅರ್ಜಿಗಳ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಇಂದಿನಿಂದ ಆರಂಭಿಸಲಿದೆ.