ನವದೆಹಲಿ: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐವರು ಸದಸ್ಯರ ಸಂವಿಧಾನಿಕ ಪೀಠವು ನಾಳೆ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ.


COMMERCIAL BREAK
SCROLL TO CONTINUE READING

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಎಸ್‌.ಎ.ಬೊಬ್ಡೆ, ಎನ್‌.ವಿ.ರಮಣ, ಉದಯ್‌ ಉಮೇಶ್‌ ಲಲಿತ್‌ ಹಾಗೂ ಡಿ.ವೈ.ಚಂದ್ರಚೂಡ್‌ ಅವರನ್ನೂ ಒಳಗೊಂಡಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್ ನೇತೃತ್ವದ ಸಂವಿಧಾನಿಕ ಪೀಠ ಜನವರಿ 10ರಂದು ಬೆಳಗ್ಗೆ 10.30ಕ್ಕೆ ಈ ಪ್ರಕರಣದ ವಿಚಾರಣೆ ಆರಂಭಿಸಲಿದೆ.


2010ರಲ್ಲಿ ಈ ವಿವಾದದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಈ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಈ ಮೂವರಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ 14 ಮೇಲ್ಮನವಿಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದವು.


ಜ.4ರಂದು ಅಯೋಧ್ಯೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌, ಈ ಸಂಬಂಧ ಮುಂದಿನ ವಿಚಾರಣೆಯನ್ನು ಜ.10ರಂದು ಸೂಕ್ತ ನ್ಯಾಯಪೀಠವು ನಡೆಸಲಿದೆ ಎಂದು ಹೇಳಿತ್ತು. ಅದರಂತೆ ನಾಳೆ ಪ್ರಕರಣದ ವಿಚಾರಣೆ ನಡೆಯಲಿದೆ.