ನವದೆಹಲಿ: ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದ ಇತ್ಯರ್ಥಕ್ಕೆ ಸಂಧಾನಕಾರರನ್ನು ನೇಮಕ ಮಾಡುವ ಕುರಿತು ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು(ಮಾ.08) ಪ್ರಕಟಿಸಲಿದೆ.


COMMERCIAL BREAK
SCROLL TO CONTINUE READING

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪಂಚ ಸದಸ್ಯರ ಪೀಠವು ಬುಧವಾರ ವಿಚಾರಣೆ ಪೂರ್ಣಗೊಳಿಸಿ, ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದವು ಭೂಮಿಗೆ ಸಂಬಂಧಿಸಿಲ್ಲ ಆದರೆ ಅದು ಭಾವನೆ ಮತ್ತು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿ ತೀರ್ಪು ಕಾಯ್ದಿರಿಸಿದೆ. 


ಮುಸ್ಲಿಂ ಅರ್ಜಿದಾರರು ಸಂಧಾನಕ್ಕೆ ಒಪ್ಪಿದ್ದಾರೆ ಎಂದು ಮುಸ್ಲಿಂ ಪರ ವಕೀಲ ನ್ಯಾ. ರಾಜೀವ್ ಧವನ್ ಹೇಳಿದ್ದರು. ಮಧ್ಯಸ್ಥಿಕೆ ವಹಿಸಲು ಯಾರಿಗೆ ಹೇಳಬೇಕು ಅಥವಾ ಯಾವ ಸಮಿತಿಗೆ ಹೇಳಬೇಕು ಎಂಬ ಬಗ್ಗೆ ಅರ್ಜಿದಾರರೇ ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಮುಖ್ಯನ್ಯಾಯ ಮೂರ್ತಿ ರಂಜನ್ ಗೊಗೊಯ್ ಹೇಳಿದ್ದರು.


ಅಯೋಧ್ಯ ವಿವಾದದಲ್ಲಿ ಅರ್ಜಿದಾರರಲ್ಲಿ ಒಬ್ಬರಾಗಿರುವ ಹಿಂದೂ ಮಹಾಸಭಾ "ಸಾರ್ವಜನಿಕರು ಮಧ್ಯಸ್ಥಿಕೆಗೆ ಒಪ್ಪುವುದಿಲ್ಲ" ಎಂದು ವಾದಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟೀಸ್ ಬಾಬ್ಡೆ" ಇದು ವಿಫಲವಾಗಿದೆ ಎಂದು ನೀವು ಹೇಳುತ್ತಿದ್ದೀರಿ, ಎಲ್ಲವನ್ನು ಪೂರ್ವಾಗ್ರಹ ಪೀಡಿತರಾಗಿ ನೋಡಬೇಡಿ, ಮಧ್ಯಸ್ಥಿಕೆ ನಡೆಸಲು ನಾವು ಪ್ರಯತ್ನಿಸುತ್ತೇವೆ" ಎಂದರು.


ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಲ್ಲಿ ಒಬ್ಬರಾದ ಜಸ್ಟೀಸ್ ಎಸ್.ಎಸ್. ಬಾಬ್ಡೆ ಅವರು, "ಇತಿಹಾಸದ ಬಗ್ಗೆ ನಮಗೆ ಹೇಳಬೇಡಿ, ನಮಗೆ ಇತಿಹಾಸವೆಲ್ಲ ಗೊತ್ತು, ದಾಳಿ ಯಾರು ಮಾಡಿದ್ದಾರೆ ಎನ್ನುವುದನ್ನು ಈಗ ಅಳಿಸಲು ಆಗುವುದಿಲ್ಲ, ಬಾಬರ ಏನು ಮಾಡಿದ್ದ, ಆಗ ರಾಜಾ ಯಾರಿದ್ದ, ಆಗ ಮಸೀದಿ ಅಥವಾ ದೇವಸ್ಥಾನ ಇತ್ತೋ ಎನ್ನುವ ಬಗ್ಗೆ ನಮಗೆ ಬೇಕಾಗಿಲ್ಲ" ಎಂದು ಹೇಳಿದರು. 


ಈಗ ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕ ತೀರ್ಮಾನಿಸಬೇಕೇ ಎನ್ನುವುದನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ. 


2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆಯಲ್ಲಿ 2.77 ಎಕರೆ ಭೂಮಿಯನ್ನು  ರಾಮ್ ಲಾಲ್ಲಾ, ಸುನ್ನಿ ವಕ್ಫ್ ಬೋರ್ಡ್, ಮತ್ತು ನಿರ್ಮೊಹಿ ಅಖಾರಾ. ಮೂರು ವಿಭಾಗವಾಗಿ ಹಂಚಿತ್ತು.ಈಗ ಸುಪ್ರೀಂ ನಲ್ಲಿ ಈ ನಡೆಯನ್ನು ವಿರೋಧಿಸಿ 14 ಅರ್ಜಿಗಳು ಸಲ್ಲಿಕೆಯಾಗಿವೆ.