ಕೊಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಕೋಲ್ಕತ್ತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ಗೆ ಸಿಬಿಐ ಬಂಧನದಿಂದ ನೀಡಿದ್ದ ರಕ್ಷಣೆಯನ್ನು ಸುಪ್ರೀಂ ಕೋರ್ಟ್​ ಶುಕ್ರವಾರ ಹಿಂಪಡೆದಿದೆ. ಈ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹಿನ್ನಡೆಯಾದಂತಾಗಿದೆ.


COMMERCIAL BREAK
SCROLL TO CONTINUE READING

ಅಲ್ಲದೆ, ರಾಜೀವ್​ ಕುಮಾರ್​​ ಬಂಧನದಿಂದ ರಕ್ಷಣೆ ಪಡೆಯಲು 7 ದಿನಗಳ ಒಳಗಾಗಿ ಹೈಕೋರ್ಟ್​​ ಮೊರೆ ಹೋಗುವಂತೆ ಹೇಳಿದೆ. ಅದಕ್ಕಾಗಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ. ರಾಜೀವ್​ ಕುಮಾರ್​ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಈ ಹಿಂದೆ  ಸಿಬಿಐ ಸುಪ್ರೀಂ ಕೋರ್ಟ್​ ಮೊರೆಹೋಗಿತ್ತು. ಇಂದು ಇದರ ವಿಚಾರಣೆ ನಡೆಸಿದ ಕೋರ್ಟ್ ಬಂಧನದಿಂದ ನೀಡಿದ್ದ ರಕ್ಷಣೆ ಹಿಂಪಡೆದಿದೆ. ಹೀಗಾಗಿ ಸಿಬಿಐ ಅಧಿಕಾರಿಗಳು ಅಗತ್ಯವಿದ್ದಲ್ಲಿ ರಾಜೀವ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಬಹುದಾಗಿದೆ.


ಚಿಟ್ ಫಂಡ್ ಹಗರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಸಾಕ್ಷಿ ನಾಶ ಮಾಡಿರುವ ಬಗ್ಗೆ ರಾಜೀವ್ ಕುಮಾರ್​ ವಿರುದ್ಧ ಸಾಕ್ಷಿಗಳನ್ನು ಸಿಬಿಐ ಸಲ್ಲಿಸಿದೆ. ಆದರೆ, ಈ ಸಂಬಂಧ ರಾಜೀವ್ ಕುಮಾರ್ ಅವರನ್ನು ವಿಚಾರಣೆ ಮಾಡಲು ಮುಂದಾಗಿದ್ದ ಸಿಬಿಐ ಅಧಿಕಾರಿಗಳನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದರು. ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು, ಬಿಜೆಪಿ ಪರವಾಗಿ ಸಿಬಿಐ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಈ ಘಟನೆಯನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದ್ದರು.