ನವದೆಹಲಿ: ಸಂಸತ್ ಕಲಾಪ ಸಂದರ್ಭದಲ್ಲಿ ರಾಫೆಲ್ ವಿವಾದದ ಕುರಿತಾಗಿ ಮಂಗಳವಾರವೂ ಪ್ರತಿಪಕ್ಷಗಳು ಗದ್ದಲ ಆರಂಭಿಸಿದ ಪರಿಣಾಮ ಕಲಾಪವನ್ನು ನಾಳೆಗೆ ಮುಂದೂಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, 'ನಿಮಗಿಂತ ಶಾಲೆ ಮಕ್ಕಳೇ ಉತ್ತಮ' ಎಂದು ಹೇಳುವ ಮೂಲಕ ಗದ್ದಲ ಆರಂಭಿಸಿದ ಸಂಸದರ ವಿರುದ್ಧ ಕೋಪ ಹೊರಹಾಕಿದರು.


COMMERCIAL BREAK
SCROLL TO CONTINUE READING

ಮಂಗಳವಾರ ಬೆಳಿಗ್ಗೆ ರಫೇಲ್ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೋಲಾಹಲ ಸೃಷ್ಟಿಸಿದವು. ಇದರಿಂದಾಗಿ ಸ್ಪೀಕರ್ ಕೆಲಕಾಲ ಸದನವನ್ನು ಮುಂದೂಡಿದರು. ಆದರೆ ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗಲೂ ಅದೇ ರೀತಿಯ ಗದ್ದಳ ಮಾಡಿ  ಕಾಂಗ್ರೆಸ್, ಎಐಎಡಿಎಂಕೆ ಮತ್ತು ಡಿಟಿಪಿ ಸಂಸದರು ಸದನದ ಬಾವಿಗೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ಇದರಿಂದಾಗಿ ತಾಳ್ಮೆ ಕಳೆದುಕೊಂಡು ಸಂಸದರನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್, "ಭಾರತೀಯ ಸಂಸತ್ತಿನಲ್ಲಿ ಅದೇನು ನಡೆಯುತ್ತಿದೆ ಎಂದು ಹೊರ ದೇಶದವರು ಪ್ರಶ್ನಿಸುವುದನ್ನು ನಾನು ಕೇಳಿದ್ದೇನೆ. ನಿಮ್ಮ ಈ ರೀತಿಯ ಗದ್ದಲ, ಗಲಾಟೆ ಮತ್ತು ಅರಾಜಕ ವರ್ತನೆ ಹೊರಗಿನವರಿಗೆ ಕೆಟ್ಟ ಸಂದೇಶ ನೀಡುತ್ತದೆ ಎನ್ನುವುದನ್ನು ಮರೆಯಬೇಡಿ' ಎಂದು ಮಹಾಜನ್‌ ಗದ್ದಲ ನಿರತ ಸಂಸದರಿಗೆ ಎಚ್ಚರಿಕೆ ನೀಡಿದರಲ್ಲದೆ, ನಿಮಗಿಂತ ಶಾಲಾ ಮಕ್ಕಳೇ ಎಷ್ಟೋ ಉತ್ತಮ" ಎಂದರು. 


ಕಾಂಗ್ರೆಸ್‌ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರೆ ಬಿಜೆಪಿ ಸದಸ್ಯರು ಕಾಂಗ್ರೆಸ್‌ ಪಕ್ಷಾಧ್ಯಕ್ಷ  ರಾಹುಲ್‌ ಗಾಂಧಿ ರಾಜೀನಾಮೆಗೆ ಒತ್ತಾಯಿಸಿದರು. 
ಸಂಸತ್ ಕಲಾಪ ಆರಂಭವಾದ ಕೂಡಲೇ ಶುರುವಾದ ಗದ್ದಲ ಕಿಂಚಿತ್ತೂ ಕಡಿಮೆಯಾಗದ ಕಾರಣ ಕಲಾಪ ನಡೆಸುವುದೇ ಅಸಾಧ್ಯವಾಗಿ ಮಹಾಜನ್‌ ಅವರು ಇಂದಿನ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.