ಜಮ್ಮು: ಜಮ್ಮು ಕಾಶ್ಮೀರದಲ್ಲಿ ಜನ ಜೀವನ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಜಮ್ಮು ಪ್ರದೇಶದ ಎಲ್ಲಾ ಜಿಲ್ಲೆಗಳಿಂದ ಸೆಕ್ಷನ್ 144 ಅನ್ನು ತೆಗೆದುಹಾಕಲಾಗಿದೆ. ಎಲ್ಲಾ ಶಾಲೆಗಳು - ಕಾಲೇಜುಗಳು ಶನಿವಾರದಿಂದ ತೆರೆಯಲಿವೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರ ಎಡಿಜಿಪಿ ಮುನೀರ್ ಖಾನ್ ಅವರು ಮಾತನಾಡಿ, 'ಜಮ್ಮುವಿನಲ್ಲಿ ಕಾನೂನು ಸುವ್ಯವಸ್ಥೆ  ನಿಯಂತ್ರಣದಲ್ಲಿದ್ದು ಪರಿಸ್ಥಿತಿ ಸಾಮಾನ್ಯವಾಗಿದೆ. ಕಾಶ್ಮೀರದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಥುವಾದಲ್ಲಿ ಗುರುವಾರ ಶಾಲೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ಯಾವುದೇ ರೀತಿಯ ತೊಂದರೆಯಿಲ್ಲದೆ ಶಾಲೆಗೆ ಹೋದರು. ಉಧಂಪುರದಲ್ಲಿನ ಶಾಲೆಗಳೂ ಶುಕ್ರವಾರದಿಂದ ತೆರೆದಿವೆ. ಸೆಕ್ಷನ್ 144 ಇನ್ನೂ ಅನ್ವಯವಾಗಿದ್ದರೂ ಕೆಲವು ಸ್ಥಳಗಳಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಉಧಂಪುರ್ ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲಾ ತಿಳಿಸಿದ್ದಾರೆ. ನಾವು ಪ್ರತಿಯೊಂದು ಪ್ರದೇಶದ ಮೇಲೆ ನಿಗಾ ಇಡುತ್ತಿದ್ದೇವೆ, ಮಾರುಕಟ್ಟೆಗಳನ್ನು ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ತೆರೆದಿಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



ಅದೇ ವೇಳೆ ಎನ್‌ಎಸ್‌ಎ ಅಜಿತ್ ದೋವಲ್ ಅವರು ಶುಕ್ರವಾರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಭೇಟಿಯಾಗಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತು ಇಬ್ಬರೂ ಚರ್ಚಿಸಿದರು. ಸಭೆ ಬಳಿಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಗೊಳ್ಳುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಜನರಿಗೆ ಅನುಕೂಲವಾಗುವಂತೆ ಈದ್-ಉಲ್-ಅಜಾಹ ವ್ಯವಸ್ಥೆ ಕುರಿತು ರಾಜ್ಯಪಾಲರು ಚರ್ಚಿಸಿದರು ಎನ್ನಲಾಗಿದೆ.