ಅನಂತ್‌ನಾಗ್‌: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಟ್ರಕ್ ಚಾಲಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕನನ್ನು ಭದ್ರತಾ ಪಡೆ ಮಂಗಳವಾರ ಬೆಳಿಗ್ಗೆ ಹತ್ಯೆಗೈದಿದೆ. ಸೋಮವಾರ ಸಂಜೆ ಜಿಲ್ಲೆಯ ಬಿಜ್‌ಬೆಹರಾ ಪಟ್ಟಣದ ಕನೆಲ್ವಾನ್ ಪ್ರದೇಶದಲ್ಲಿ ಟ್ರಕ್ ಚಾಲಕನ ಮೇಲೆ ಭಯೋತ್ಪಾದಕರು ಮಾರಣಾಂತಿಕ ದಾಳಿ ನಡೆಸಿದ್ದರು.


COMMERCIAL BREAK
SCROLL TO CONTINUE READING

ಟ್ರಕ್ ಚಾಲಕನನ್ನು ಹತ್ಯೆಗೈದ ಪ್ರದೇಶದಲ್ಲೇ ರಾತ್ರಿಯಿಡೀ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಇತರ ಇಬ್ಬರು ಭಯೋತ್ಪಾದಕರು ಕಾರ್ಯಾಚರಣೆಯ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕ ಸ್ಥಳೀಯನೇ ಎನ್ನಲಾಗಿದ್ದು, ಟ್ರಕ್ ಚಾಲಕ ಆತನನ್ನು ಗುರುತಿಸಿದ್ದಾನೆ.


ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ದಕ್ಷಿಣ ಕಾಶ್ಮೀರದಲ್ಲಿ ಕಾಶ್ಮೀರಿ ಅಲ್ಲದವರ ಮೇಲೆ ಭಯೋತ್ಪಾದಕರು ನಡೆಸಿದ ನಾಲ್ಕನೇ ದಾಳಿ ಇದಾಗಿದೆ. ಟ್ರಕ್ ಚಾಲಕನನ್ನು ಜಮ್ಮುವಿನ ಕತ್ರಾದ ನಾರಾಯಣ್ ದತ್ ಎಂದು ಗುರುತಿಸಲಾಗಿದೆ. "ಭಯೋತ್ಪಾದಕರು ಬಿಜ್ಬೆಹರಾದ ಕನೆಲ್ವಾನ್ ಪ್ರದೇಶದಲ್ಲಿ ಗುಂಡು ಹಾರಿಸಿ ನಾಗರಿಕನನ್ನು ಕೊಂದರು" ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.


ಜಮ್ಮು-ಶ್ರೀನಗರ ಹೆದ್ದಾರಿಯಿಂದ 10 ಕಿಲೋಮೀಟರ್ ದೂರದಲ್ಲಿರುವ ಕನೆಲ್ವಾನ್ ಪ್ರದೇಶದಲ್ಲಿ ಟ್ರಕ್ ಚಾಲಕ ಕಾಯುತ್ತಿದ್ದಾಗ ಭಯೋತ್ಪಾದಕರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಹಿಂದೆ, ಟ್ರೋಪಿನ ಚಾಲಕರಾದ ರಾಜಸ್ಥಾನದ ಷರೀಫ್ ಖಾನ್ ಮತ್ತು ಇಲ್ಯಾಸ್ ಅವರನ್ನು ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಇದಲ್ಲದೆ, ಶೋಪಿಯಾನ್‌ನಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಭಯೋತ್ಪಾದಕರು ಸೇಬಿನ ವ್ಯಾಪಾರಿಯನ್ನು ಕೊಂದು ಅವರ ಸಹಚರನನ್ನು ಗಾಯಗೊಳಿಸಿದ್ದರು. ಪುಲ್ವಾಮಾದಲ್ಲಿ, ಛತ್ತೀಸ್‌ಗಢದ ದೈನಂದಿನ ಕೂಲಿ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು.


ಸೋಮವಾರ, ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನ ಬಸ್ ನಿಲ್ದಾಣದ ಬಳಿ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 19 ಜನರು ಗಾಯಗೊಂಡಿದ್ದಾರೆ. ಸಂಜೆ 4: 15 ಕ್ಕೆ ಹೋಟೆಲ್ ಪ್ಲಾಜಾ ಬಳಿ ಗ್ರೆನೇಡ್ ಸ್ಫೋಟ ಸಂಭವಿಸಿದೆ. ಮೂರು ಜನರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.