ಇಂದು ಭಾರತ್ ಬಂದ್ : ದೇಶಾದ್ಯಂತ ವ್ಯಾಪಕ ಭದ್ರತೆ
ಜಾತಿ ಆಧಾರಿತ ಮೀಸಲಾತಿ ವಿರೋಧಿಸಿ ವಿವಿಧ ಸಂಘಟನೆಗಳು ರಾಷ್ಟ್ರಾದ್ಯಂತ ಭಾರತ್ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ವ್ಯಾಪಕ ಪೋಲಿಸ್ ಭದ್ರತೆ ಕೈಗೊಳ್ಳಲಾಗಿದೆ.
ನವದೆಹಲಿ : ಜಾತಿ ಆಧಾರಿತ ಮೀಸಲಾತಿ ವಿರೋಧಿಸಿ ವಿವಿಧ ಸಂಘಟನೆಗಳು ರಾಷ್ಟ್ರಾದ್ಯಂತ ಭಾರತ್ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ವ್ಯಾಪಕ ಪೋಲಿಸ್ ಭದ್ರತೆ ಕೈಗೊಳ್ಳಲಾಗಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಭರತ್ ಬಂದ್ ತೀವ್ರ ಸ್ವರೂಪ ಪಡೆದಿದ್ದು, ಅಹಿತಕರ ಘಟನೆಗಳನ್ನು ತಡೆಯಳು ಮುಂಜಾಗ್ರತಾ ಕ್ರಮವಾಗಿ ಸುಮಾರು 6 ಸಾವಿರಕ್ಕೂ ಅಧಿಕ ಪೋಲಿಸರನ್ನು ಭೂಪಾಲ್ ನಗರದಲ್ಲಿ ನಿಯೋಜಿಸಲಾಗಿದೆ. ಅಲ್ಲದೆ, ಜೈಪುರದಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಎರಡು ನಗರಗಳಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತ್ ಬಂದ್ ಕುರಿತಾದ ಸಂದೇಶಗಳಿಂದಾಗಿ ಇಂದು ಬಂದ್ ಆಚರಿಸಲಾಗುತ್ತಿದೆಯೇ ಹೊರತು, ಯಾವುದೇ ಸಂಘಟನೆ ಅಧಿಕೃತವಾಗಿ ಬಂದ್'ಗೆ ಕರೆ ನೀಡಿಲ್ಲ. ಆದರೂ ಸಹ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಅಚ್ಚರಿ ಮೂಡಿಸಿದೆ. ಉಳಿದಂತೆ ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಬಂದ್'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಏಪ್ರಿಲ್ 2 ರಂದು ಸುಪ್ರೀಂ ಕೋರ್ಟ್ ಎಸ್ಸಿ/ಎಸ್ಟಿ ಕಾಯ್ದೆಯನ್ನು 'ದುರ್ಬಲಗೊಳಿಸುವ' ತೀರ್ಪಿನ ವಿರುದ್ಧ ದೇಶಾದ್ಯಂತದ ಹಲವು ದಲಿತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದ್ದವು. ಈ ಸಂದರ್ಭದಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿದರಲ್ಲದೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಏತನ್ಮಧ್ಯೆ, ಹಿಂದುಳಿದ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಕೇಂದ್ರ ಹೇಳಿದೆ.