ಏಳು ನಿವೃತ್ತ ಸೇನಾ ಅಧಿಕಾರಿಗಳು ಇಂದು ಬಿಜೆಪಿಗೆ ಸೇರ್ಪಡೆ
ಲೋಕಸಭಾ ಚುನಾವಣೆ ಬೆನ್ನಲ್ಲೇ ಭಾರತೀಯ ರಕ್ಷಣಾ ಪಡೆಯ ಏಳು ನಿವೃತ್ತ ಹಿರಿಯ ಸೇನಾಧಿಕಾರಿಗಳು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆ ಬೆನ್ನಲ್ಲೇ ಭಾರತೀಯ ರಕ್ಷಣಾ ಪಡೆಯ ಏಳು ನಿವೃತ್ತ ಹಿರಿಯ ಸೇನಾಧಿಕಾರಿಗಳು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮುಖದಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಈ ಹಿರಿಯ ಸೇನಾಧಿಕಾರಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರನ್ನು ಸ್ವಾಗತಿಸಿದ ನಿರ್ಮಲಾ ಸೀತಾರಾಮನ್, ನಿವೃತ್ತ ಅಧಿಕಾರಿಗಳು ಬಿಜೆಪಿ ಸೇರುತ್ತಿರುವುದು ನಮ್ಮ ಭಾಗ್ಯ ಎಂದು ಹೇಳಿದರು.
ಲೆಫ್ಟಿನೆಂಟ್ ಜನರಲ್ ಜೆಬಿಎಸ್ ಯಾದವ್, ಲೆಫ್ಟಿನೆಂಟ್ ಜನರಲ್ ಆರ್.ಎನ್.ಸಿಂಗ್, ಲೆಫ್ಟಿನೆಂಟ್ ಜನರಲ್ ಎಸ್.ಕೆ.ಪಟ್ಯಾಲ್, ಲೆಫ್ಟಿನೆಂಟ್ ಜನರಲ್ ಸುನೀತ್ ಕುಮಾರ್,ಲೆಪ್ಟಿನೆಂಟ್ ಜನರಲ್ ನಿತಿನ್ ಕೊಹ್ಲಿ,ಕರ್ನಲ್ ಆರ್.ಕೆ.ತ್ರಿಪಾಠಿ ಮತ್ತು ವಿಂಗ್ ಕಮಾಂಡರ್ ನವನೀತ್ ಮಗೋನ್ ಇಂದು ಬಿಜೆಪಿ ಸೇರಿದ ಸೇನೆಯ ಹಿರಿಯ ಅಧಿಕಾರಿಗಳಾಗಿದ್ದಾರೆ.
ಈಗಾಗಲೇ ವಿರೋಧ ಪಕ್ಷಗಳು ಬಿಜೆಪಿ ರಕ್ಷಣಾ ಪಡೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿರುವ ಬೆನ್ನಲ್ಲೇ ಸೇನೆಯ 7 ನಿವೃತ್ತ ಅಧಿಕಾರಿಗಳು ಬಿಜೆಪಿ ಸೇರ್ಪಡೆಗೊಂಡಿರುವುದು ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.