ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ 50 ದಿನಗಳಿಂದ ದೆಹಲಿಯ ಶಾಹೀನ್ ಬಾಗ್ ನಲ್ಲಿ ನಡೆಸಲಾಗುತ್ತಿರುವ ಪ್ರತಿಭಟನೆಯ ಕುರಿತು ಎಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.  ಈ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ, ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘ ಕಾಲದವರೆಗೆ ಪ್ರತಿಭಟನೆ ನಡೆಸುವಂತಿಲ್ಲ ಎಂದು ಹೇಳಿದೆ. ಈ ವೇಳೆ ಯಾವುದೇ ಒಂದು ಸಾರ್ವಜನಿಕ ಸ್ಥಳವನ್ನು ನೀವು ದೀರ್ಘ ಕಾಲದವರೆಗೆ ಸುತ್ತುವರೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಈ ಪ್ರಕರಣದಲ್ಲಿ ನ್ಯಾಯಪೀಠ ದೆಹಲಿ ಪೊಲೀಸ್ ಹಾಗೂ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ 17ಕ್ಕೆ ಮುಂದೂಡಿದೆ.


COMMERCIAL BREAK
SCROLL TO CONTINUE READING

ಈ ವೇಳೆ ಹೇಳಿಕೆ ನೀಡಿರುವ ನ್ಯಾಯಪೀಠ ನೀವು ಯಾವುದೇ ಒಂದು ಸಾರ್ವಜನಿಕ ಸ್ಥಳವನ್ನು ದೀರ್ಘಕಾಲದವರೆಗೆ ಸುತ್ತುವರೆಯುವುದು ಸರಿಯಲ್ಲ. ಪ್ರತಿಭಟನೆ ನಡೆಸಲು ಬೇರೆ ಯಾವುದಾದರೊಂದು ಜಾಗ ಆಯ್ದುಕೊಳ್ಳಿ  ಎಂದು ಹೇಳಿದೆ. ಆದರೆ, ಪ್ರತಿಭಟನಾ ನಿರತರನ್ನು ಜಾಗ ಖಾಲಿ ಮಾಡಿಸಲು ಯಾವುದೇ ಆದೇಶ ಸುಪ್ರೀಂ ನೀಡಿಲ್ಲ. ಈ ಪ್ರಕರಣದಲ್ಲಿ ಎಲ್ಲ ಪಕ್ಷಗಳ ಹೇಳಿಕೆಯನ್ನು ಆಲಿಸುವುದು ಅಗತ್ಯವಾಗಿದೆ ಎಂದ ನ್ಯಾಯಾಲಯ ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.


ಇಂದು ದೆಹಲಿಯ ಶಾಹೀನ್ ಬಾಗ್ ಪ್ರಕರಣದ ಕುರಿತು ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಅಮಿತ್ ಸಾಹನಿ , ಬಿಜೆಪಿ ಮುಖಂಡ ನಂದಕಿಶೋರ್ ಗರ್ಗ್ ಹಾಗೂ ಇತರರು ಈ ಪ್ರಕರಣದ ವಿಚಾರಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ.ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.


ಇದಕ್ಕೂ ಮೊದಲು ಸುಪ್ರೀಂ ಕೋರ್ಟ್  ಶುಕ್ರವಾರ ಅಂದರೆ ಫೆಬ್ರುವರಿ 7ನೇ ತಾರೀಖಿಗೆ ಈ ಕುರಿತಾದ ಅರ್ಜಿಗಳ ವಿಚಾರಣೆ ನಡೆಸಲು ನಿರಾಕರಿಸಿತ್ತು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ತಮಗೆ ತಿಳಿದಿರುವುದಾಗಿ ಹೇಳಿದ್ದ ನ್ಯಾಯಪೀಠ ಇಂದು ಈ ಪ್ರಕರಣದ ವಿಚಾರಣೆ ಸಾಧ್ಯವಿಲ್ಲ ಎಂದಿತ್ತು. ಫೆಬ್ರುವರಿ 8ನೇ ತಾರೀಖಿಗೆ ದೆಹಲಿಯಲ್ಲಿ ನಡೆದ ವಿಚಾನಸಭೆ ಚುನಾವಣೆಗಳ ಹಿನ್ನೆಲೆ ನ್ಯಾಯಪೀಠ ತನ್ನ ವಿಚಾರಣೆಯನ್ನು ಫೆಬ್ರುವರಿ 11ಕ್ಕೆ ಮುಂದೂಡಿತ್ತು.


ಪ್ರಕರಣದಲ್ಲಿ ಅರ್ಜಿಗಳನ್ನು ದಾಖಲಿಸಿರುವ ವಕೀಲ ಅಮಿತ್ ಸಾಹನಿ ಹಾಗೂ ಬಿಜೆಪಿ ಮುಖಂಡ ನಂದ ಕಿಶೋರ್ ಗರ್ಗ್, ಶಾಹೀನ್ ಬಾಗ್ ನಲ್ಲಿ ಬಂದಾಗಿರುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ ಈ ಸಂಪೂರ್ಣ ಪ್ರಕರಣದಲ್ಲಿ ನಡೆಸಲಾಗುತ್ತಿರುವ ಹಿಂಸಾಚಾರವನ್ನು ತಡೆಯಲು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳು ನಿಗಾ ವಹಿಸಬೇಕು ಎಂದೂ ಕೂಡ ಕೋರಲಾಗಿದ್ದು, ಪ್ರಕರಣದಲ್ಲಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಕೋರಲಾಗಿದೆ.