ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು ಮಂಜೂರು
ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಗೆ ಜಾಮೀನು ಮಂಜೂರು.
ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಶಶಿ ತರೂರ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ನ್ಯಾಯಾಲಯದ ಅನುಮತಿಯಿಲ್ಲದೆ ಶಶಿ ತರೂರ್ ವಿದೇಶ ಪ್ರಯಾಣ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ.
ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದ್ದು, ನ್ಯಾಯಾಲಯಕ್ಕೆ ಒಂದು ಲಕ್ಷ ರೂಪಾಯಿ ಬಾಂಡ್ ಒದಗಿಸಿ ನಿರೀಕ್ಷಣಾ ಜಾಮೀನು ಪಡೆಯಬೇಕಾಗಿದೆ.
ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಶಶಿ ತರೂರ್ರನ್ನು ಆರೋಪಿ ಎಂದು ಪರಿಗಣಿಸಿ ಕೇಸ್ ದಾಖಲಿಸಲಾಗಿತ್ತು. ಜುಲೈ 7 ರಂದು ನಡೆಯಲಿರುವ ವಿಚಾರಣೆ ಬಳಿಕ ತಮ್ಮನ್ನು ಬಂಧಿಸುತ್ತಾರೆಂಬ ಆತಂಕದಲ್ಲಿ ಶಶಿ ತರೂರ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ಸೆಕ್ಷನ್ 498 ಎ ಹಾಗೂ 306ರ ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ. ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಪತಿ ಶಶಿ ತರೂರ್ರನ್ನು ಸಿಬಿಐನ ವಿಶೇಷ ನ್ಯಾಯಾಲಯವು ಆರೋಪಿ ಎಂದು ಹೇಳಿತ್ತು.