ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ. ಶಶಿಕಾಲಾ ಅವರನ್ನು ಹೊರಹಾಕುವಲ್ಲಿ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆ ಒಂದು ಏಕಮತದ ನಿರ್ಣಯವನ್ನು ಇಂದು ಜಾರಿಗೆ ತಂದಿದೆ.


COMMERCIAL BREAK
SCROLL TO CONTINUE READING

ನಿರೀಕ್ಷೆಯಂತೆ ಎಐಎಡಿಎಂಕೆ ಪಕ್ಷದಿಂದ ಶಶಿಕಲಾ ಮತ್ತು ಆಕೆಯ ಸೋದರಳಿಯ ಟಿಟಿವಿ ದಿನಕರನ್ ಇಬ್ಬರನ್ನು ವಜಾ ಮಾಡಲಾಗಿದೆ. ಇಂದು ನಡೆದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 


ಈ ಹಿಂದೆ ಟಿಟಿವಿ ದಿನಕರನ್ ಬೆಂಬಲಿಗರು ಎಐಎಡಿಎಂಕೆ ಸಾಮಾನ್ಯ ಸಭೆಗೆ ತಡೆ ನೀಡುವಂತೆ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಮೂಲಕ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಗೆ ಹಸಿರು ನಿಶಾನೆ ತೋರಿಸಿತ್ತು. ಈ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಇಂದು ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆ ನಡೆದಿದೆ. 


ಪಕ್ಷದ ಆಂತರಿಕ ಕಚ್ಚಾಟಗಳಿಂದ ಬುದ್ದಿಕಲಿತಿರುವ ಎಐಎಡಿಎಂಕೆ ಪಕ್ಷವು ದಿವಂಗತ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪಕ್ಷದ ಹಿಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಜೆ.ಜಯಲಲಿತಾ ಅವರನ್ನೇ ಪಕ್ಷದ ಶಾಶ್ವತ ಕಾರ್ಯದರ್ಶಿ ಎಂದು ಘೋಷಿಸಿದೆ. ಜೊತೆಗೆ ಜಯಲಲಿತಾ ಅವರು ನೇಮಕ ಮಾಡಿದ್ದ ಪದಾಧಿಕಾರಿಗಳೇ ಮುಂದೆಯೂ ಪಕ್ಷದ ಪ್ರಮುಖ ಸ್ಥಾನಗಳಲ್ಲಿ ಮುಂದುವರಿಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.


ಇದೇ ವೇಳೆಯಲ್ಲಿ ತ.ನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜೊತೆಗೂಡಿ ಪಕ್ಷದ ಎರಡೆಲೆ ಚಿನ್ಹೆಯನ್ನು ಪುನಃ ಪಡೆಯಲು ನಿರ್ಧರಿಸಿದ್ದಾರೆ.