ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪರಿವಾರದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಕೊಡುಗೆ ಸಹ ಅಪಾರ: ಶತ್ರುಘ್ನ ಸಿನ್ಹಾ
ಭಾರತದ ಇಬ್ಭಾಗಕ್ಕೆ ಕಾರಣನಾದ ಪಾಕಿಸ್ತಾನದ ಪಿತಾಮಹ ಮಹಮ್ಮದ್ ಅಲಿ ಜಿನ್ನಾ ಪರ ಶತ್ರುಘ್ನ ಸಿನ್ಹಾ ಬ್ಯಾಟಿಂಗ್ ಮಾಡಿದ್ದಾರೆ.
ಚಿಂದವಾಡ: ಬಿಜೆಪಿ ತೊರೆದು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಇದೀಗ ಕಾಂಗ್ರೆಸ್ ಪಕ್ಷಕ್ಕೇ ಶತ್ರುವಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿದೆ. ಮಧ್ಯಪ್ರದೇಶದ ಚಿಂದವಾಡದಲ್ಲಿ ಮುಖ್ಯಮಂತ್ರಿ ಕಮಲನಾಥ್ ಪುತ್ರ ಕಾಂಗ್ರೆಸ್ ಅಭ್ಯರ್ಥಿಯಾದ ನಕುಲ್ ನಾಥ್ ಪರ ಚುನಾವಣಾ ಪ್ರಚಾರ ಭಾಷಣದ ಸಂದರ್ಭದಲ್ಲಿ ಭಾರತದ ಇಬ್ಭಾಗಕ್ಕೆ ಕಾರಣನಾದ ಪಾಕಿಸ್ತಾನದ ಪಿತಾಮಹ ಮಹಮ್ಮದ್ ಅಲಿ ಜಿನ್ನಾ ಪರ ಬ್ಯಾಟಿಂಗ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ.
ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡುತ್ತಾ, "ಈ ಕಾಂಗ್ರೆಸ್ ಪರಿವಾರದಲ್ಲಿ ಮಹಾತ್ಮಾ ಗಾಂಧಿಯವರಿಂದ ಹಿಡಿದು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ವರೆಗೆ, ಮಹಮ್ಮದ್ ಅಲಿ ಜಿನ್ಹಾರಿಂದ ಹಿಡಿದು ಜವಾಹರ್ಲಾಲ್ ನೆಹರು ತನಕ, ದಿವಂಗತ ಇಂದಿರಾ ಗಾಂಧಿ, ರಾಜೀವ್ಗಾಂಧಿ, ರಾಹುಲ್ಗಾಂಧಿಯವರಿಂದ ಹಿಡಿದು ಸುಭಾಷ್ ಚಂದ್ರ ಬೋಸ್ ಅವರ ಈ ಕಾಂಗ್ರೆಸ್ ಪಕ್ಷ, ದೇಶದ ಬೆಳವಣಿಗೆಗಾಗಿ, ದೇಶದ ಅಭಿವೃದ್ಧಿಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಹತ್ವದ ಕೊಡುಗೆ ನೀಡಿದೆ. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳುವ ಮೂಲಕ ಭಾರೀ ವಿವಾದ ಹುಟ್ಟಿ ಹಾಕಿದ್ದಾರೆ.
ಮುಂದುವರೆದು ಮಾತನಾಡುತ್ತಾ, ಪ್ರಧಾನಿ ಮೋದಿ ಅವರ ಹೆಸರಲ್ಲದೆ ವ್ಯಕ್ತಿಗಿಂತಲೂ ದೊಡ್ಡ ಪಕ್ಷವಿದೆ, ಪಕ್ಷಕ್ಕಿಂತ ದೊಡ್ಡ ರಾಷ್ಟ್ರವಿದೆ, ರಾಷ್ಟಕ್ಕಿತ ದೊಡ್ಡದು ಏನೂ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರದ ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಜಾರಿಯನ್ನು ಟೀಕಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾ ಅವರು ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.