ರಾಹುಲ್ ಗಾಂಧಿ ಭೇಟಿ ಮಾಡಿದ ಶತ್ರುಘ್ನ ಸಿನ್ಹಾ, ಎಪ್ರಿಲ್ 6ಕ್ಕೆ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ
ಬಿಜೆಪಿ ಬಂಡಾಯದ ನಾಯಕ ಶತ್ರುಘ್ನ ಸಿನ್ಹಾ ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ನವದೆಹಲಿ: ಬಿಜೆಪಿ ಬಂಡಾಯದ ನಾಯಕ ಶತ್ರುಘ್ನ ಸಿನ್ಹಾ ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.ಈಗ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಗುರುವಾರದಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶತ್ರುಘ್ನ ಸಿನ್ಹಾ "ಸದ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ, ನವರಾತ್ರಿ ವೇಳೆ ನಿಮಗೆ ಗುಡ್ ಸಕಾರಾತ್ಮಕ ಸುದ್ದಿ ಲಭಿಸಲಿದೆ" ಎಂದು ಸಿನ್ಹಾ ತಿಳಿಸಿದರು.
ಶತ್ರುಘ್ನ ಸಿನ್ಹಾ ಕಾಂಗ್ರೆಸ್ ನ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವ ಬೆನ್ನಲ್ಲೇ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಶಕ್ತಿ ಸಿನ್ಹಾ ಗೋಹಿಲ್ " ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ರಾಷ್ಟ್ರದ ಹಿತಾಸಕ್ತಿಗಾಗಿ ಕಾಂಗ್ರೆಸ್ ಪಕ್ಷವನ್ನು ಎಪ್ರಿಲ್ 6 ರಂದು ಸೇರ್ಪಡೆಯಾಗಲಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಶತ್ರುಘ್ನ ಸಿನ್ಹಾ ಬಿಜೆಪಿ ಸಂಸದರಾಗಿದ್ದುಕೊಂಡೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.ಅಲ್ಲದೆ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.ಈ ಹಿನ್ನಲೆಯಲ್ಲಿ ಈ ಸಾರಿ ಬಿಜೆಪಿ ಅವರಿಗೆ ಪಾಟ್ನಾ ಸಾಹೇಬ್ ನಿಂದ ಸ್ಪರ್ಧಿಸಲು ತಿರಸ್ಕರಿಸಿತ್ತು.