ನವದೆಹಲಿ: ಕೇಂದ್ರ ಸರ್ಕಾರದ ಮತ್ತು ಬಿಜೆಪಿ‌ಯ ಜನವಿರೋಧಿ ಕ್ರಮಗಳನ್ನು ಬಹಿರಂಗವಾಗಿ ಟೀಕಿಸುವ ಅದೇ ಪಕ್ಷದ  ಬಂಡಾಯ ಸಂಸದ ಮತ್ತು ಬಾಲಿವುಡ್‌ ನ ಖ್ಯಾತ ನಟ ಶತ್ರುಘ್ನ ಸಿನ್ಹಾ ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ರಾಹುಲ್ ಗಾಂಧಿ ಮತ್ತು ಶತ್ರುಘ್ನ ಸಿನ್ಹಾ ಭೇಟಿ ಬಳಿಕ ಟ್ವೀಟ್ ಮಾಡಿರುವ ಕಾಂಗ್ರೆಸ್‌ ವಕ್ತಾರ ಶಕ್ತಿಸಿನ್ಹ ಗೋಹಿಲ್‌, 'ಶತ್ರುಘ್ನ ಸಿನ್ಹ ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆಸಿದ್ದಾರೆ.‌ ಅಧಿಕೃತವಾಗಿ ಇದೇ ಏಪ್ರಿಲ್ 6ರಂದು ಅವರು ಕಾಂಗ್ರೆಸ್‌ಗೆ ಸೇರಲು ನಿರ್ಧರಿಸಲಾಗಿದೆ. ಬಿಹಾರದಲ್ಲಿ ಅವರು ರಾಹುಲ್ ಗಾಂಧಿ ಜೊತೆ ಸ್ಟಾರ್‌ ಪ್ರಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ' ಎಂದು ಹೇಳಿದ್ದಾರೆ.


ರಾಹುಲ್​ ಗಾಂಧಿ ಅವರ ಭೇಟಿ ಬಳಿಕ ಮಾತನಾಡಿರುವ ಶತ್ರುಘ್ನ ಸಿನ್ಹಾ , ರಾಹುಲ್‌ ಅತ್ಯಂತ ಪ್ರೋತ್ಸಾಹಿಸುವ ಮತ್ತು ಧನಾತ್ಮಕವಾಗಿ ಯೋಚಿಸುವ ವ್ಯಕ್ತಿ. ಬಿಜೆಪಿ ಮೇಲಿನ ವಾಗ್ದಾಳಿ ಮತ್ತು ದೂಷಣೆಯನ್ನು ಘನತೆಯಿಂದ ಮಾಡಿರುವುದಾಗಿ ಪ್ರಶಂಸಿದರು. ರಾಹುಲ್ ಗಾಂಧಿ ವಯಸ್ಸಿನಲ್ಲಿ ನನಗಿಂತ ಚಿಕ್ಕವರು, ಆದರೆ ಅವರು ದೇಶಕ್ಕೆ ಪ್ರಸಿದ್ಧ ನಾಯಕರಾಗಿ ಹೊರಹೊಮ್ಮಿದ್ದಾರೆ. ನಾನು ಜವಾಹರಲಾಲ್ ನೆಹರು ಮತ್ತು ಮಹಾತ್ಮಾ ಗಾಂಧಿ ಕುಟುಂಬದ ಬೆಂಬಲಿಗ. ಅವರನ್ನು ನಾನು ರಾಷ್ಟ್ರ ನಿರ್ಮಾಣ ಮಾಡಿದವರೆಂದು ಪರಿಗಣಿಸಿದ್ದೇನೆ ಎಂದು ತಿಳಿದರು.


ಕೆಲ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಅವರನ್ನು ಟೀಕಿಸುತ್ತಲೇ ಬಂದಿದ್ದ 72 ವರ್ಷದ ಶತ್ರುಘ್ನ ಸಿನ್ಹಾ ಅವರು, ಕಳೆದ ಜನವರಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಸ್ವಪಕ್ಷದವರ ವಿರುದ್ಧವೇ ತಿರುಗಿಬಿದ್ದಿದ್ದರು.


ಬಿಹಾರದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಮಾಡಿದ್ದ ಬಿಜೆಪಿ ಶತ್ರುಘ್ನ ಸಿನ್ಹಾ ಪ್ರತಿನಿಧಿಸುವ ಪಾಟ್ನಾ ಸಾಹಿಬ್‌ ಕ್ಷೇತ್ರಕ್ಕೆ ಕೇಂದ್ರ ಸಚಿವ ರವಿಶಂಕರ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದ ಶತ್ರುಘ್ನ ಸಿನ್ಹಾ, ಸರ್ವಾಧಿಕಾರಿ ಧೋರಣೆಯಿರುವುದರಿಂದ ನಾನು ಬಿಜೆಪಿ ತೊರೆಯಲು ಮುಂದಾಗಿದ್ದೇನೆ. ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅದಲ್ಲದೆ ಎಂಥದೇ ಪರಿಸ್ಥಿತಿಯಿದ್ದರೂ ಪಾಟ್ನಾ ಸಾಹಿಬ್‌ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಪಣತೊಟ್ಟಿದ್ದಾರೆ.