ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಇನ್ನಿಲ್ಲ
ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಮ್ಮ 81 ನೇ ವಯಸ್ಸಿನಲ್ಲಿ ಶನಿವಾರದಂದು ನಿಧನರಾಗಿದ್ದಾರೆ.
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಮ್ಮ 81 ನೇ ವಯಸ್ಸಿನಲ್ಲಿ ಶನಿವಾರದಂದು ನಿಧನರಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ಪಕ್ಷವನ್ನು ಮುನ್ನಡೆಸಿದ್ದರು ಮತ್ತು ಸ್ವತಃ ಈಶಾನ್ಯ ದೆಹಲಿ ಸ್ಥಾನದಿಂದ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ವಿರುದ್ಧ ಸ್ಪರ್ಧಿಸಿ 3.66 ಲಕ್ಷ ಮತಗಳಿಂದ ಸೋತರು. ಈ ಬಾರಿ ದೆಹಲಿಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿತ್ತು, ಈ ಹಿನ್ನಲೆಯಲ್ಲಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅದನ್ನು ಸ್ವೀಕರಿಸಿರಲಿಲ್ಲ.
ಶೀಲಾ ದೀಕ್ಷಿತ್ ಅವರು ಪಂಜಾಬಿನ ಕಪುರ್ತಲಾದಲ್ಲಿ ಮಾರ್ಚ್ 31 1938 ರಂದು ಜನಿಸಿದ್ದರು.ಇತಿಹಾಸದಲ್ಲಿ ಅವರು ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದಾರೆ. 1984ರಿಂದ 1989 ರವರೆಗೆ ಉತ್ತರ ಪ್ರದೇಶದ ಕನೌಜ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.ಇದಾದ ನಂತರ 1998 ರಿಂದ 2013 ರವರೆಗೆ ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು, ನಂತರ ಅವರು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಸೋಲನ್ನು ಅನುಭವಿಸಿದ್ದರು.
ಶೀಲಾ ದೀಕ್ಷಿತ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ' ಸ್ನೇಹಪರ ವ್ಯಕ್ತಿತ್ವದಿಂದ ಆಶೀರ್ವದಿಸಲ್ಪಟ್ಟ ಅವರು ದೆಹಲಿಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.