ನವದೆಹಲಿ: ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನವು ಗೋದಾವರಿ-ಮರಾಠವಾಡ ನೀರಾವರಿ ಅಭಿವೃದ್ಧಿ ಕಾರ್ಪೊರೇಷನ್ ಎಂಒಯುಗೆ ಸಹಿ ಹಾಕಿದ್ದು ಕಾಲುವೆ ನಿರ್ಮಾಣಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೇ 500 ಕೋಟಿ ರೂ. ಸಾಲ ನೀಡಲು ಮುಂದಾಗಿದೆ.


COMMERCIAL BREAK
SCROLL TO CONTINUE READING

ಪ್ರವರಾ ನದಿಯಲ್ಲಿರುವ ನಿಲ್ವಾಂಡೆ ಅಣೆಕಟ್ಟಿನಿಂದ ಅಹ್ಮದ್ ನಗರ ಜಿಲ್ಲೆಯ ಸಂಗಮ್ನರ್, ಅಕೋಲ್, ರಹಾಟಾ, ರಹುರಿ ಮತ್ತು ಕೊಪರ್ ಗಾವ್ ತಾಲೂಕ್ ಮತ್ತು ನಾಸಿಕ್ನಲ್ಲಿರುವ ಸಿನ್ನಾರ್ ಹೀಗೆ ಒಟ್ಟು 182 ಹಳ್ಳಿಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


ಈ ವಿಚಾರವಾಗಿ ಈಗಾಗಲೇ ರಾಜ್ಯ ಸರಕಾರದ ಗೋದಾವರಿ-ಮರಾಠವಾಡ ನೀರಾವರಿ ಅಭಿವೃದ್ಧಿ ನಿಗಮದೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ ಎಂದು ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಹೇಳುವಂತೆ ಈ ಯೋಜನೆಗಾಗಿ 500 ಕೋಟಿ ರೂ.ಗಳನ್ನು ನೀಡುತ್ತದೆ. ಆದರೆ ಅದರ ಮೇಲೆ ಬಡ್ಡಿಯನ್ನು ವಿಧಿಸುವುದಿಲ್ಲ" ಎಂದು ಅವರು ಹೇಳಿದರು, ಆದರೆ ಮರುಪಾವತಿ ಅವಧಿಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು ಎನ್ನಲಾಗಿದೆ.


ದೇವಾಲಯದ ಟ್ರಸ್ಟ್ ನಿಯಮಿತವಾಗಿ ಸಾಮಾಜಿಕ ಕಾರ್ಯಕ್ಕಾಗಿ ಹಣವನ್ನು ಒದಗಿಸುತ್ತದೆ ಆದರೆ ನೀಲ್ವಾಂಡೆ ಅಣೆಕಟ್ಟುಗೆ ನಿಯೋಜಿಸಿದ ಮೊತ್ತವು ಬೃಹತ್ ಪ್ರಮಾಣದ್ದು ಮತ್ತು ಅಪರೂಪದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.


ನೀಲ್ವಾಂಡೆ ಅಣೆಕಟ್ಟು ನೀರನ್ನು ಸಂಗ್ರಹಿಸುವುದನ್ನು ಪ್ರಾರಂಭಿಸಿದೆ. ಆದರೆ ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಳಸಬೇಕಾದ ಬಲ ಮತ್ತು ಎಡ ದಂಡೆ ನಾಲೆಗಳನ್ನು ನಿರ್ಮಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟು 1,200 ಕೋಟಿ ರೂಪಾಯಿ ಮೊತ್ತದ ನೀರಾವರಿ ಯೋಜನೆಗೆ ದೇವಾಲಯ ಬಡ್ಡಿರಹಿತವಾಗಿ 500 ಕೋಟಿ ರೂಪಾಯಿ ನೀಡಿದೆ.


ಶಿರಡಿ ದೇವಾಲಯದ ಟ್ರಸ್ಟ್ ಈ ಹಿಂದೆ 350 ಕೋಟಿ ರೂ. ವೆಚ್ಛದ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ಸಂಸ್ಥೆಗೆ 50 ಕೋಟಿ ರೂ.ಗಳನ್ನು ಸಾಲವಾಗಿ ನೀಡಿತ್ತು. ಕಕಾಡಿ ಗ್ರಾಮದಲ್ಲಿ ನೆಲೆಗೊಂಡಿದ್ದ ಈ ವಿಮಾನ ನಿಲ್ದಾಣ ಈಗ ಕಾರ್ಯನಿರ್ವಹಿಸುತ್ತಿದೆ.