`ಶಿವಸೇನೆ ಬಯಸಿದರೆ ಸರ್ಕಾರ ರಚನೆಗೆ ಅಗತ್ಯ ಸಂಖ್ಯೆ ಒಟ್ಟುಗೂಡಿಸಲಿದೆ`; ಸಂಜಯ್ ರೌತ್
`ರಾಜ್ಯದಲ್ಲಿ 50-50 ಸೂತ್ರದ ಆಧಾರದ ಮೇಲೆ ಸರ್ಕಾರ ರಚಿಸುವ ಆದೇಶವನ್ನು ಜನರು ನೀಡಿದ್ದಾರೆ. ಅವರಿಗೆ ಶಿವಸೇನೆಯ ಮುಖ್ಯಮಂತ್ರಿ ಬೇಕು` ಎಂದು ಸಂಜಯ್ ರೌತ್ ಹೇಳಿದರು.
ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ 50-50 ಸೂತ್ರಗಳನ್ನು ಅನುಸರಿಸುವಂತೆ ಪಟ್ಟು ಹಿಡಿದಿರುವ ಶಿವಸೇನೆಗೆ ಬಿಜೆಪಿ ಮಣೆ ಹಾಕುತ್ತಿಲ್ಲ. ಏತನ್ಮಧ್ಯೆ, ಶುಕ್ರವಾರ ಶಿವಸೇನೆ ನಾಯಕ ಸಂಜಯ್ ರೌತ್, ಶಿವಸೇನೆ ಬಯಸಿದರೆ ಅದು ಸರ್ಕಾರ ರಚಿಸಲು ಅಗತ್ಯ ಸಂಖ್ಯೆಗಳನ್ನು ಒಟ್ಟುಗೂಡಿಸುತ್ತದೆ ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ 50-50 ಸೂತ್ರದ ಆಧಾರದ ಮೇಲೆ ಸರ್ಕಾರ ರಚಿಸುವ ಆದೇಶವನ್ನು ಜನರು ನೀಡಿದ್ದಾರೆ. ಅವರಿಗೆ ಶಿವಸೇನೆಯ ಮುಖ್ಯಮಂತ್ರಿ ಬೇಕು. ಶಿವಸೇನೆ ಬಯಸಿದರೆ, ಅದು ರಾಜ್ಯದಲ್ಲಿ ಸ್ಥಿರವಾದ ಸರ್ಕಾರವನ್ನು ರಚಿಸಲು ಅಗತ್ಯವಾದ ಶಕ್ತಿಯನ್ನು ಸಂಗ್ರಹಿಸುತ್ತದೆ' ಎಂದು ಸಂಜಯ್ ರೌತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ 'ಶಿವಸೇನೆಗೆ ಅಧಿಕಾರದ ದಾಹವಿಲ್ಲ. ಆದರೆ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ' ಎಂದಿದ್ದರು. ಮುಖ್ಯಮಂತ್ರಿ ಹುದ್ದೆ ಯಾವಾಗಲೂ ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ನಮ್ಮ ಶಕ್ತಿ ಚೆನ್ನಾಗಿದೆ. ಮುಖ್ಯಮಂತ್ರಿ ಹುದ್ದೆ ನಮ್ಮ ಹಕ್ಕು ಮತ್ತು ಇದು ನಮ್ಮ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದ್ದರು.
ಲೋಕಸಭೆಯ ಸಮಯದಲ್ಲಿ ನಿರ್ಧರಿಸಲಾಗಿದ್ದ 50-50 ಸೂತ್ರವನ್ನು ಬಿಜೆಪಿ ಒಪ್ಪುತ್ತಿಲ್ಲ. ಇದೀಗ ಮತ್ತೆ ಮಾತನಾಡುವುದೇನಿದೆ ಎಂದು ಬೇಸರ ವ್ಯಕ್ತಪಡಿಸಿದ ಉದ್ಧವ್ ಠಾಕ್ರೆ, ಯಾವುದೇ ಹೊಸ ಮಾತುಕತೆ ಇರುವುದಿಲ್ಲ. ಅಧಿಕಾರಕ್ಕಾಗಿ ನೀವು ಯಾವುದೇ ತಪ್ಪು ಹೆಜ್ಜೆ ಇಡುವುದಿಲ್ಲ ಎಂದು ತಮ್ಮ ಶಾಸಕರ ಮೇಲೆ ತಮಗಿರುವ ವಿಶ್ವಾಸವನ್ನು ಒತ್ತಿ ಹೇಳಿದರು.
ಉದ್ಧವ್ ಸರ್ಕಾರ ರಚನೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ:
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ವಿಳಂಬ ಧೋರಣೆ ಸರಿಯಲ್ಲ ಎಂದು ತಿಳಿಸಿದ ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ... ನಮ್ಮ ಪಕ್ಷವು ಬಿಜೆಪಿ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ. ಆದರೆ ಸರ್ಕಾರ ರಚನೆ ಕುರಿತು ತಮ್ಮ ತಂದೆ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಏಕನಾಥ ಶಿಂಧೆ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ:
ಶಿವಸೇನೆ ಗುರುವಾರ ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದೆ. ಆದಿತ್ಯ ಠಾಕ್ರೆ ಅವರು ಶಾಸಕಾಂಗ ಪಕ್ಷದ ಮುಖಂಡರ ಹುದ್ದೆಗೆ ಶಿಂಧೆ ಅವರ ಹೆಸರನ್ನು ಮತ್ತು ಮುಖ್ಯ ವಿಪ್ ಹುದ್ದೆಗೆ ಸುನಿಲ್ ಪ್ರಭು ಅವರ ಹೆಸರನ್ನು ಪ್ರಸ್ತಾಪಿಸಿದರು.
"ಶಾಸಕರ ಪರವಾಗಿ ಕೆಲಸ ಮಾಡಲು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ ಜಿ ಅವರ ಹೆಸರನ್ನು ಪ್ರಸ್ತಾಪಿಸುವುದು ಚುನಾಯಿತ ಶಾಸಕರಾಗಿ ನನ್ನ ಭಾಗ್ಯವಾಗಿದೆ. ಶಾಸಕಾಂಗಕ್ಕಾಗಿ ಸುನಿಲ್ ಪ್ರಭು ಜಿ ಅವರು ಪಕ್ಷದ ಮುಖ್ಯ ವಿಪ್ ಆಗಿ ಆಯ್ಕೆಯಾಗಿದ್ದಾರೆ" ಎಂದು ಆದಿತ್ಯ ಠಾಕ್ರೆ ತಿಳಿಸಿದರು.