ದೇವೇಂದ್ರ ಫಡ್ನವೀಸ್ ಗೆ ತಿರುಗೇಟು ನೀಡಿದ ಶಿವಸೇನಾ
ಶಿವಸೇನಾ ಮತ್ತು ಬಿಜೆಪಿ ನಡುವೆ ಪರಸ್ಪರ ಟೀಕಾಪ್ರಹಾರ ಮುಂದುವರೆದಿದ್ದು, ಈಗ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಶಿವಸೇನಾ ಮತ್ತೆ ತಿರುಗೇಟು ನೀಡಿದೆ.
ನವದೆಹಲಿ: ಶಿವಸೇನಾ ಮತ್ತು ಬಿಜೆಪಿ ನಡುವೆ ಪರಸ್ಪರ ಟೀಕಾಪ್ರಹಾರ ಮುಂದುವರೆದಿದ್ದು, ಈಗ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಶಿವಸೇನಾ ಮತ್ತೆ ತಿರುಗೇಟು ನೀಡಿದೆ.
ಸಿಎಂ ಪದವಿಯನ್ನು 50:50 ಸೂತ್ರದ ಭಾಗವಾಗಿಸುವ ವಿಚಾರವಾಗಿ ಫಡ್ನವೀಸ್ ಪ್ರತಿಕ್ರಿಯಿಸುತ್ತಾ 'ಶಿವಸೇನೆಗೆ 5 ವರ್ಷಗಳ ಕಾಲ ಸಿಎಂ ಹುದ್ದೆ ಬೇಕಾಗಬಹುದು, ಏನನ್ನಾದರೂ ಬಯಸುವುದು ಮತ್ತು ಏನನ್ನಾದರೂ ಪಡೆಯುವುದು ಎರಡು ವಿಭಿನ್ನ ಸಂಗತಿ. ಸಿಎಂ ಹುದ್ದೆಗೆ 50:50 ಸೂತ್ರದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಅವರು ಬೇಡಿಕೆಗಳೊಂದಿಗೆ ಬರಬೇಕು, ನಾವು ಮಾತುಕತೆಗೆ ಕುಳಿತಾಗ ಅದರ ಅರ್ಹತೆಯ ಬಗ್ಗೆ ಚರ್ಚಿಸುತ್ತೇವೆ' ಎಂದು ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಿರುವ ಶಿವಸೇನಾ ವಕ್ತಾರ ಸಂಜಯ್ ರೌತ್ ' ಸಿಎಂ ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. '50 -50 ಸೂತ್ರ'ವನ್ನು ಎಂದಿಗೂ ಚರ್ಚಿಸಲಾಗಿಲ್ಲ ಎಂದು ಅವರು ಹೇಳುತ್ತಿದ್ದರೆ, ನಾವು ಸತ್ಯದ ವ್ಯಾಖ್ಯಾನವನ್ನು ಬದಲಾಯಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಸಿಎಂ ಮಾತನಾಡುತ್ತಿರುವ ವಿಷಯದ ಬಗ್ಗೆ ಏನು ಚರ್ಚಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮಾಧ್ಯಮಗಳು ಸಹಿತ ಸಾಕ್ಷಿಯಾಗಿವೆ 'ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು ಫಡ್ನವೀಸ್ ಅವರು ಶಿವಸೇನಾದ '50 -50 ಸೂತ್ರ'ದ ಪ್ರಸ್ತಾಪವನ್ನು ತಿರಸ್ಕರಿಸಿ ಮುಂದಿನ ಐದು ವರ್ಷಗಳ ಕಾಲ ತಾವೇ ಸಿಎಂ ಆಗಿರುವುದಾಗಿ ಹೇಳಿದ್ದರು.