ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಸಂಜಯ್ ರೌತ್ ಹೇಳಿಕೆ!
`ನಮಗೆ 170 ಶಾಸಕರ ಬೆಂಬಲವಿದೆ, ಆ ಸಂಖ್ಯೆ 175 ಕ್ಕೆ ಏರಬಹುದು` ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಶಿವಸೇನೆ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಹಗ್ಗಾ-ಜಗ್ಗಾಟ ಉಲ್ಬಣಿಸಿದೆ. ಶಿವಸೇನೆಗೆ 170 ಶಾಸಕರ ಬೆಂಬಲವಿದೆ ಎಂದು ಹೇಳುವ ಮೂಲಕ ಶಿವಸೇನೆ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರೌತ್ ಬಿಜೆಪಿಗೆ ಶಾಕ್ ನೀಡಿದ್ದಾರೆ.
'ನಮಗೆ 170 ಶಾಸಕರ ಬೆಂಬಲವಿದೆ, ಆ ಸಂಖ್ಯೆ 175 ಕ್ಕೆ ಏರಬಹುದು' ಎಂದು ಶಿವಸೇನೆ ಮುಖಂಡ ರಾಜ್ಯಸಭಾ ಸಂಸದ ಸಂಜಯ್ ರೌತ್ ಹೇಳಿದ್ದಾರೆ. ಬಿಜೆಪಿ ತನ್ನ ಮುಖ್ಯಮಂತ್ರಿ ಶಪಥ ಸಮಾರಂಭಕ್ಕಾಗಿ ರೇಸ್ ಕೋರ್ಸ್ ಅಥವಾ ವಾಂಖೆಡೆ ಕ್ರೀಡಾಂಗಣವನ್ನು ಕಾಯ್ದಿರಿಸಿದರೂ, ಶಿವಸೇನೆಯ ನಾಯಕನೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದವರು ಬಿಜೆಪಿಯನ್ನು ಗೇಲಿ ಮಾಡಿದರು.
ಇದೇ ಸಂದರ್ಭದಲ್ಲಿ ಶರದ್ ಪವಾರ್ ಭೇಟಿಯನ್ನು ಸಮರ್ಥಿಸಿಕೊಂಡ ಸಂಜಯ್ ರೌತ್, ಶರದ್ ಪವಾರ್ ಅವರನ್ನು ಹೊಗಳಿದರು. ಶರದ್ ಪವಾರ್ ಅವರಂತ ನಿಲುವು ಹೊಂದಿರುವ ನಾಯಕ ದೇಶದಲ್ಲಿ ಇನ್ನೊಬ್ಬರಿಲ್ಲ. ಮಹಾರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಅವರೊಂದಿಗೆ ಮಾತನಾಡುವುದು ತಪ್ಪಲ್ಲ ಎಂದು ರೌತ್ ಸಮರ್ಥಿಸಿಕೊಂಡಿದ್ದಾರೆ.