Shraddha Murder Case: ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಣೆ, ಗಲ್ಲು ಶಿಕ್ಷೆಗೆ ವಕೀಲರ ಆಗ್ರಹ
ಅಫ್ತಾಬ್ ಪೂನಾವಾಲಾ ಮೇ 18ರಂದು ಶ್ರದ್ಧಾ(27)ಳನ್ನು ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ. ಸದ್ಯ ಅಫ್ತಾಬ್ ದೆಹಲಿ ಪೊಲೀಸರ ವಶದಲ್ಲಿದ್ದಾನೆ.
ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಇಂದು (ನ.17)ದೆಹಲಿಯ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಅಫ್ತಾಬ್‍ನನ್ನುಸಾಕೇತ್ ಕೋರ್ಟ್ 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಯನ್ನು 10 ದಿನಗಳ ಕಸ್ಟಡಿಗೆ ಒಪ್ಪಿಸುವಂತೆ ದೆಹಲಿ ಪೊಲೀಸರು ಬೇಡಿಕೆ ಇಟ್ಟಿದ್ದರು. ನಾರ್ಕೋ ಪರೀಕ್ಷೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಹ ನ್ಯಾಯಾಲಯದಲ್ಲಿ ನಡೆದಿದೆ. ಅಫ್ತಾಬ್ ನಾರ್ಕೋ ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾನೆಂದು ತಿಳಿದುಬಂದಿದೆ.
ವಿಚಾರಣೆಗೆ ಅಫ್ತಾಬ್ ಹಾಜರಾಗುವ ಮುನ್ನ ವಕೀಲರು ಸಾಕೇತ್ ನ್ಯಾಯಾಲಯದಲ್ಲಿ ಪ್ರತಿಭಟನೆ ನಡೆಸಿದರು. ಶ್ರದ್ಧಾಳ ಕೊಲೆಗಾರನಿಗೆ ಮರಣದಂಡನೆ ವಿಧಿಸಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದರು. ಪೊಲೀಸರು ಸಲ್ಲಿಸಿರುವ ಅರ್ಜಿಯ ಪ್ರಕಾರ, ಆರೋಪಿಯು ದುಷ್ಕರ್ಮಿಗಳು ಮತ್ತು ಧಾರ್ಮಿಕ ಸಂಘಟನೆಗಳ ಮೂಲಕ ಬೆದರಿಕೆ ಎದುರಿಸುತ್ತಿದ್ದಾನೆಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಹೇಳಿದ್ದಾರೆ.
ಇದನ್ನೂ ಓದಿ: Shradhha Murder Case: 25 ಹುಡುಗಿಯರ ಜೊತೆ ಸಂಬಂಧ ಬೆಳೆಸಿದ್ದ ಅಫ್ತಾಬ್.!
ಇದಕ್ಕೂ ಮುನ್ನ ಅರ್ಜಿ ಸ್ವೀಕರಿಸಿದ ನ್ಯಾಯಾಧೀಶರು, ‘ಈ ವಿಷಯದ ಸೂಕ್ಷ್ಮತೆ ಮತ್ತು ಮಾಧ್ಯಮಗಳ ಪ್ರಸಾರದ ಬಗ್ಗೆ ನನಗೆ ಅರಿವಿದೆ. ಜನರು ಈ ವಿಷಯದ ಬಗ್ಗೆ ಗಮನಹರಿಸುತ್ತಿದ್ದಾರೆ ಎಂಬುದು ನನಗೂ ತಿಳಿದಿದೆ’ ಎಂದು ಹೇಳಿದ್ದಾರೆ. ಅಫ್ತಾಪ್ ಮೇ 18ರ ಸಂಜೆ ತನ್ನ ಜೊತೆಗೆ ‘ಲಿವ್-ಇನ್ ರಿಲೇಷನ್ ಶಿಪ್’ ಹೊಂದಿದ್ದ ಶ್ರದ್ಧಾ ವಾಕರ್(27)ಳನ್ನು ಕತ್ತು ಹಿಸುಕಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ಮೆಹ್ರೌಲಿಯ ಸುತ್ತಮುತ್ತ ಎಸೆದಿದ್ದ. ತಾನು ವಾಸವಿದ್ದ ಮನೆಯಲ್ಲಿ ಸುಮಾರು 3 ವಾರಗಳ ಕಾಲ 300 ಲೀಟರ್ ಫ್ರಿಜ್‍ನಲ್ಲಿ ಶ್ರದ್ಧಾಳ ದೇಹವನ್ನು ಇಟ್ಟಿದ್ದ ಕೊಲೆಗಡುಕ, ಕತ್ತಲು ಆಗುತ್ತಿದ್ದಂತೆಯೇ ದೇಹದ ವಿವಿಧ ಭಾಗಗಳನ್ನು ಹೊರಗೆ ಹೋಗಿ ಎಸೆಯುತ್ತಿದ್ದನಂತೆ.
ಅಫ್ತಾಬ್ ಮೋಸಕ್ಕೆ ಶ್ರದ್ಧಾ ಬಲಿ!
2018ರಲ್ಲಿ ಡೇಟಿಂಗ್ ಆಪ್ ಮೂಲಕ ಅಫ್ತಾಬ್‍ಗೆ ಶ್ರದ್ಧಾ ಪರಿಚಯವಾಗಿತ್ತು. ಬಳಿಕ ಪ್ರೀತಿಸಲು ಶುರು ಮಾಡಿದ್ದ ಈ ಜೋಡಿ 2019ರಲ್ಲಿ ಒಂದೇ ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದರು. ಶ್ರದ್ಧಾ ಜೊತೆಗೆ ಲವ್ ಆದ ಮೇಲೂ ಅಫ್ತಾಬ್ ಹಲವು ಯುವತಿಯರ ಜೊತೆಗೆ ಲವ್ವಿ ಡವ್ವಿ ಇಟ್ಟುಕೊಂಡಿದ್ದನಂತೆ. ಹೀಗಾಗಿ ಅಫ್ತಾಬ್ ಫೋನ್‍ಗೆ ಜಿಪಿಎಸ್ ಹಾಕಿ ಶ್ರದ್ಧಾ ಟ್ರೇಸ್ ಮಾಡುತ್ತಿದ್ದಳಂತೆ.
ಇದನ್ನೂ ಓದಿ: ಆಪ್ ಗೆ ಹಿನ್ನೆಡೆ, ಸತ್ಯೆಂದರ್ ಜೈನ್ ಗೆ ಜಾಮೀನು ತಿರಸ್ಕರಿಸಿದ ದೆಹಲಿ ಕೋರ್ಟ್
ಅಫ್ತಾಬ್ ಎಲ್ಲೆಲ್ಲಿ ಹೋಗ್ತಿದ್ದ ಅಂತಾ ಆತನ ಚಲನವಲಗಳ ಮೇಲೆ ಶ್ರದ್ಧಾ ಹದ್ದಿನ ಕಣ್ಣಿಟ್ಟಿದ್ದಳಂತೆ. ಡೇಟಿಂಗ್ ಆಪ್ ಮೂಲಕ ಮತ್ತೊಬ್ಬ ಯುವತಿಯನ್ನು ಪರಿಚಯಿಸಿಕೊಂಡಿದ್ದ ಅಫ್ತಾಬ್ ಆಕೆಯನ್ನು ತನ್ನ ರೂಂಗೆ ಕರೆದುಕೊಂಡು ಬಂದಿದ್ದನಂತೆ. ಈ ವಿಚಾರ ಗೊತ್ತಾದ ಬಳಿಕ ತನನ್ನು ಮದುವೆಯಾಗುವಂತೆ ಶ್ರದ್ಧಾ ಆತನಿಗೆ ಒತ್ತಾಯಿಸಿದ್ದಳು. ಇದರಿಂದ ಕೋಪಗೊಂಡ ಅಫ್ತಾಬ್ ಶ್ರದ್ಧಾಳನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಶ್ರದ್ಧಾಳ ದೇಹದ 13 ಭಾಗಗಳನ್ನು ಪತ್ತೆ ಹಚ್ಚಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಅಫ್ತಾಬ್ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ತನಿಖೆಗೆ ಸಹಕರಿಸುತ್ತಿಲ್ಲವಂತೆ. ಹೀಗಾಗಿ ಆತನಿಗೆ 'ನಾರ್ಕೋ ಟೆಸ್ಟ್' ಅಗತ್ಯವಿದೆ ಎಂದು ಹೇಳಿದ್ದಾರೆ.
ಶ್ರದ್ಧಾಳ ರುಂಡ, ಫೋನ್ ಮತ್ತು ಅಪರಾಧಕ್ಕೆ ಬಳಸಿದ ಆಯುದ್ಧ ಇದುವರೆಗೆ ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಅಫ್ತಾಬ್ ಕೊಲೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಆತನಲ್ಲಿ ಪಶ್ಚಾತ್ತಾಪದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.