ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸಿಂಗಂ ಖ್ಯಾತಿಯ ಅಣ್ಣಾಮಲೈ
ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿರುವುದಾಗಿ ಫೇಸ್ಬುಕ್ ಲೈವ್ನಲ್ಲಿ ಹೇಳಿಕೊಂಡಿರುವ ಅಣ್ಣಾಮಲೈ.
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡು ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜ್ಯಕೀಯಕ್ಕೆ ಎಂಟ್ರಿ ಕೊಡಲಿರುವುದಾಗಿ ಫೇಸ್ಬುಕ್ ಲೈವ್ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ರಾಜಕೀಯಕ್ಕೆ ಪದಾರ್ಪಣೆ ಮಾಡುವ ಬಗ್ಗೆ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ಅಣ್ಣಾಮಲೈ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿರುವುದಾಗಿ ತಿಳಿಸಿದ್ದಾರೆ.
ತಾಯ್ನಾಡಿನಲ್ಲಿ ಸಮಾಜ ಕಾರ್ಯ:
ಫೇಸ್ಬುಕ್ ಲೈವ್ನಲ್ಲಿ ಮಾತನಾಡುತ್ತಾ ತಮ್ಮ ಮುಂದಿನ ನಡೆ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡ ಸಿಂಗಂ ತಾವು ತಮ್ಮ ಬದುಕಿನಲ್ಲಿ ಕೆಲವು ಬದಲಾವಣೆಗಳನ್ನು ತರಬೇಕೆಂದು ನಿರ್ಧರಿಸಿರುವುದಾಗಿ ಮಾಹಿತಿ ನೀಡಿದರಲ್ಲದೆ ಇದಕ್ಕಾಗಿ ತನ್ನ ತಾಯ್ನಾಡು ತಮಿಳುನಾಡಿನಲ್ಲಿ ಇದ್ದುಕೊಂಡೇ ಸಮಾಜ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ ನೀವೂ ಸಹ ನಿಮ್ಮ ಬದುಕಿನಲ್ಲಿ ಬದಲಾವಣೆಗಳನ್ನು ರೂಢಿಸಿಕೊಳ್ಳಿ ಎಂದು ವಿಶೇಷವಾಗಿ ಯುವ ಜನತೆಗೆ ಕಿವಿಮಾತು ಹೇಳಿದರು.
ಮಿಸ್ ಯೂ ಕರ್ನಾಟಕ:
ಕರ್ನಾಟಕ ಪೊಲೀಸ್ ಅಧಿಕಾರಿಯಾಗಿ 10 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ರಾಜ್ಯದ ಜನತೆ ನನಗೆ ನೀಡಿದ ಪ್ರೀತಿಗೆ ನಾನೂ ಆಭಾರಿ 'ಮಿಸ್ ಯೂ ಕರ್ನಾಟಕ' ಎಂದ ಅಣ್ಣಾಮಲೈ ತಾವು ತಮ್ಮ ಬದುಕಿನಲ್ಲಿ ಹಲವಾರು ಗುರಿ ಇಟ್ಟುಕೊಂಡು ತಮ್ಮ ವೃತ್ತಿಗೆ ವಿದಾಯ ಹೇಳಿದ್ದೆ ಎಂಬುದನ್ನು ಉಲ್ಲೇಖಿಸಿದರು. ಇದೇ ವೇಳೆ 2021ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡುವುದಾಗಿ ಘೋಷಿಸಿದ ಅವರು ಬಡವರಿಗೆ, ಕೃಷಿಕರಿಗೆ ಒಟ್ಟು ಕೊಡುವುದಾಗಿ ಅದಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು.
ಪೊಲೀಸರು ಒತ್ತಡಕ್ಕೆ ಬಗ್ಗಬಾರದು, ರಾಜಕೀಯ ವ್ಯಕ್ತಿಗಳು ಜನಪರವಾಗಿದ್ದರೆ ಒಳ್ಳೆಯದು:
ಫೇಸ್ಬುಕ್ ಲೈವ್ನಲ್ಲಿ ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಒತ್ತದವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ರಾಜಕೀಯ ನಾಯಕರು ಪೊಲೀಸರ ಮೇಲೆ ಒತ್ತಡ ಹಾಕುವುದು ಸಹಜವೇ. ಆದರೆ ಪೊಲೀಸರು ಎಲ್ಲಾ ಒತ್ತಡಗಳಿಗೆ ಮಣಿಯದೆ ಜನಪರವಾದ ಕೆಲಸಗಳನ್ನು ಮಾಡಬೇಕು. ಅಂತೆಯೇ ಜನಪ್ರತಿನಿಧಿಗಳು ತಮ್ಮನ್ನು ಆಯ್ಕೆ ಮಾಡಿದ ಜನರಿಗಾಗಿ ಉತ್ತಮ ಕಾರ್ಯ ನಿರ್ವಹಿಸಿದರೆ ಒಳ್ಳೆಯದು ಎಂದರಲ್ಲದೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಯುವ ಜನತೆ ರಾಜಕೀಯವನ್ನು ಪ್ರವೇಶಿಸುವುದರ ಮಹತ್ವವನ್ನು ಒತ್ತಿ ಹೇಳಿದರು.