LoC ಬಳಿಯ ಪರಿಸ್ಥಿತಿ ಕುರಿತು ಸೇನಾ ಮುಖ್ಯಸ್ಥರ ಗಂಭೀರ ಹೇಳಿಕೆ!
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ-ಪಾಕ್ ಗಡಿಯ ಕುರಿತು ಗಂಭೀರವಾಗಿ ಹೇಳಿಕೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, LoC ಬಳಿ ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹೆಚ್ಚಿದ್ದು, ಭಾರತೀಯ ಸೇನೆ ಯಾವುದೇ ಪರಿಸ್ಥಿಯಲ್ಲೂ ಕೂಡ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಿರಬೇಕು ಎಂದಿದ್ದಾರೆ.
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, LoC ಬಳಿ ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಹೆಚ್ಚಿದ್ದು, ಭಾರತೀಯ ಸೇನೆ ಯಾವುದೇ ಪರಿಸ್ಥಿಯಲ್ಲೂ ಕೂಡ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಿರಬೇಕು ಎಂದಿದ್ದಾರೆ. "ಗಡಿಭಾಗದಲ್ಲಿನ ಪರಿಸ್ಥಿತಿ ಯಾವುದೇ ಸಂದರ್ಭದಲ್ಲಿ ಉದ್ವಿಘ್ನಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ" ಎಂದು ರಾವತ್ ಹೇಳಿದ್ದಾರೆ. ಕಳೆದ ಆಗಸ್ಟ್ ನಿಂದ ಪಾಕಿಸ್ತಾನದ ವತಿಯಿಂದ ನಡೆಸಲಾಗುತ್ತಿರುವ ಕದನ ವಿರಾಮ ಉಲ್ಲಂಘನೆ ಹಾಗೂ ಗುಂಡಿನ ಚಕಮಕಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪ್ರಮುಖರು ನೀಡಿರುವ ಈ ಹೇಳಿಕೆ ಭಾರಿ ಮಹತ್ವಪಡೆದುಕೊಂಡಿದೆ. ಅಷ್ಟೇ ಅಲ್ಲ ಆಗಸ್ಟ್ ನಲ್ಲಿಯೇ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು.
ನಿನ್ನೆಯಷ್ಟೇ ಕಣಿವೆ ಪ್ರಾಂತ್ಯದ ಸುಂದರ್ಬನಿ ಸೆಕ್ಟರ್ ನಲ್ಲಿ ಪಾಕಿಸ್ತಾನದ ಬ್ಯಾಟ್ ತಂಡ ನಡೆಸಿರುವ ಕಾರ್ಯಾಚರಣೆಯನ್ನು ಹೊಡೆದುಹಾಕಿತ್ತು ಎಂಬುದು ಇಲ್ಲಿ ಗಮನಾರ್ಹ. ಒಂದೆಡೆ ಪಾಕಿಸ್ತಾನ ವಿವಿಧ ಪ್ಲಾಟ್ ಫಾರ್ಮ್ ಗಳ ಮೇಲೆ ಜಮ್ಮು-ಕಾಶ್ಮೀರದ ವಿಚಾರವನ್ನು ಕೆದಕುತ್ತಲೇ ಇದ್ದರೆ, ಇನ್ನೊಂದೆಡೆ ಸಂಸತ್ ನಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿದ್ದ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ, ಆಗಸ್ಟ್ ನಿಂದ ಅಕ್ಟೋಬರ್ ಕಾಲಾವಧಿಯಲಿ ಪಾಕ್ ವತಿಯಿಂದ 950 ಬಾರಿ ಕದನವಿರಾಮದ ಉಲ್ಲಂಘನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಡಿಸೆಂಬರ್ 31ಕ್ಕೆ ನಿವೃತ್ತರಾಗಲಿದ್ದಾರೆ ಬಿಪಿನ್ ರಾವತ್
ಭಾರತೀಯ ಸೇನಾ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಅವರ ಕಾರ್ಯಕಾಲ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿದೆ. ಬಳಿಕ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸದ್ಯ ಅವರು ಭಾರತೀಯ ಸೇನೆಯಲಿ ಸಹಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಸೇನೆಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಜನರಲ್ ನರವಣೆ ಭಯೋತ್ಪಾದನೆ ನಿಗ್ರಹದ ವಿಶೇಷ ಅನುಭವ ಹೊಂದಿದ್ದಾರೆ. ಭಾರತೀಯ ಸೇನೆಯ 27ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಜನರಲ್ ನರವಣೆ ಸುಮಾರು ಎರಡೂವರೇ ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.