ಸೋಲನ್‌ನಲ್ಲಿ ಬಹುಮಹಡಿ ಕಟ್ಟಡ ಕುಸಿತ: ಆರು ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಮೃತ
ಘಟನೆ ನಡೆದಾಗ ಒಟ್ಟು 30 ಸಿಬ್ಬಂದಿ ಮತ್ತು ಇತರ ಕೆಲವರು ಕಟ್ಟಡದಲ್ಲಿದ್ದರು ಎಂದು ಸೇನೆಯು ಹೇಳಿದೆ.
ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಬಹುಮಹಡಿ ಕಟ್ಟಡವು ಕುಸಿದು ಬಿದ್ದ ಪರಿಣಾಮ ಆರು ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿದ್ದು ಪಾರುಗಾಣಿಕಾ ಕಾರ್ಯ ಪ್ರಗತಿಯಲ್ಲಿದೆ.
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಭಾನುವಾರ ಕುಸಿದು ಬಿದ್ದಿದ್ದು, ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿರುವ ಶಂಕೆ ಇದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ದುರಂತ ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಆರು ಸೇನಾ ಸಿಬ್ಬಂದಿ ಮತ್ತು ಓರ್ವ ನಾಗರಿಕ ಸೇರಿದ್ದಾರೆ ಎಂದು ಸೋಲನ್‌ನ ಉಪ ಆಯುಕ್ತ ಕೆ.ಸಿ.ಚಮನ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. "ಇಲ್ಲಿಯವರೆಗೆ ಸುಮಾರು 17 ಸೇನಾ ಸಿಬ್ಬಂದಿ ಮತ್ತು 11 ನಾಗರಿಕರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಸಿಕ್ಕಿಬಿದ್ದಿರುವ ಶಂಕೆ ಇದೇ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಇಂದು ಮಧ್ಯಾಹ್ನದೊಳಗೆ ಪೂರ್ಣಗೊಳಿಸಲಾಗುವುದು" ಎಂದು ಅವರು ಹೇಳಿದರು.
ಘಟನೆ ನಡೆದಾಗ ಒಟ್ಟು 30 ಸಿಬ್ಬಂದಿ ಮತ್ತು ಇತರ ಕೆಲವರು ಕಟ್ಟಡದಲ್ಲಿದ್ದರು ಎಂದು ಸೇನೆಯು ಹೇಳಿದೆ. ಸಂಪೂರ್ಣ ಪಾರುಗಾಣಿಕಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ವಹಿಸುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಕುಸಿದಿರುವ ಈ ಕಟ್ಟಡವು ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್‌ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿದೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದರೆ, ಉಳಿದವರ ರಕ್ಷಣೆಗಾಗಿ ಪಾರುಗಾಣಿಕಾ ಕಾರ್ಯ ಪ್ರಗತಿಯಲ್ಲಿದೆ.