`ಒಂದು ದೇಶ ಒಂದು ಚುನಾವಣೆ` ಕುರಿತ ಪ್ರಧಾನಿ ಮೋದಿ ಸಭೆಗೆ ಹಲವು ನಾಯಕರ ಗೈರು ಸಾಧ್ಯತೆ
ಒಂದು ರಾಷ್ಟ್ರ ಒಂದು ಚುನಾವಣೆ ಹಾಗೂ ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ನೀತಿ ಆಯೋಗ ಅವರ ಪ್ರಸ್ತಾಪ ಕುರಿತಾಗಿ ಪ್ರಧಾನಿ ಮೋದಿ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ಹಾಗೂ ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ನೀತಿ ಆಯೋಗ ಅವರ ಪ್ರಸ್ತಾಪ ಕುರಿತಾಗಿ ಪ್ರಧಾನಿ ಮೋದಿ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ಈ ವಿಚಾರವಾಗಿ ಚರ್ಚಿಸಲು ಎಲ್ಲ ಪಕ್ಷದ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ ಮೂವರು ಮುಖ್ಯಮಂತ್ರಿಗಳು ಕೂಡ ಸೇರಿದ್ದಾರೆ. ಈಗ ಈ ಸಭೆಯಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮತ್ತು ತೆಲಂಗಾಣದ ಕೆ ಚಂದ್ರಶೇಖರ್ ರಾವ್ ಸಭೆಯಲ್ಲಿ ಭಾಗವಹಿಸುತ್ತಿಲ್ಲ.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಕೂಡ ಹಾಜರಾಗುವುದು ಕೂಡ ಅನುಮಾನ ಎನ್ನಲಾಗಿದೆ.
ಪ್ರಧಾನಿ ಮೋದಿಯ ಸರ್ವ ಪಕ್ಷದ ಸಭೆಯಲ್ಲಿ ಕೇಜ್ರಿವಾಲ್ ಮತ್ತು ನಾಯ್ಡು ಅವರು ಪ್ರತಿನಿಧಿಗಳನ್ನು ಕಳಿಸಲಿದ್ದಾರೆ ಎನ್ನಲಾಗಿದೆ.ಆಮ್ ಆದ್ಮಿ ಪಕ್ಷದಿಂದ ರಾಘವ್ ಚಾಧಾ ಮತ್ತು ಟಿಡಿಪಿಯ ಜಯದೇವ್ ಗಲ್ಲಾ ಅವರನ್ನು ಸಭೆಯಲ್ಲಿ ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ತೆಲಂಗಾಣ ಮುಖ್ಯಮಂತ್ರಿ ಶ್ರೀ ರಾವ್ ಸ್ಥಾನದಲ್ಲಿ ಅವರ ಪುತ್ರ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.ಪ್ರಧಾನಿ ಅಧ್ಯಕ್ಷತೆಯಲ್ಲಿನಡೆದ ಹಿಂದಿನ ನೀತಿ ಆಯೋಗ ಆಡಳಿತ ಮಂಡಳಿಯ ಸಭೆ ಗೈರು ಹಾಜರಾಗುವ ಮೂಲಕ ಕೇಂದ್ರದ ಬಗ್ಗೆ ರಾವ್ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದರು ತಮ್ಮ ರಾಜ್ಯವನ್ನು ಸರ್ಕಾರ ಕಡೆಗಣಿಸಿದೆ ಎಂದು ಅವರು ಆರೋಪಿದ್ದರು.
"ಚರ್ಚಿಸಲು ಏನು ಇದೆ ? ನಾವು ಕೇಂದ್ರದೊಂದಿಗೆ ಸಾಂವಿಧಾನಿಕ ಸಂಬಂಧವನ್ನು ಮಾತ್ರ ಕಾಪಾಡಿಕೊಳ್ಳುತ್ತೇವೆ. ನಾನು ಈಗಲೂ ನನ್ನ ಫೆಡರಲ್ ಫ್ರಂಟ್ ನ್ನು ಬೆಂಬಲಿಸುತ್ತೇನೆ. ಕೇಂದ್ರದೊಂದಿಗೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜ್ಯಕ್ಕೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ. ಮೋದಿ ಫ್ಯಾಸಿಸ್ಟ್ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ" ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯಿಸಿದ್ದರು.
"ಏಕ ರಾಷ್ಟ್ರದ ಒಂದು ಚುನಾವಣೆ" ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಒಂದೇ ಸಭೆ ಸಾಕಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ನಿನ್ನೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. "ಈ ವಿಷಯಕ್ಕೆ ಸಾಂವಿಧಾನಿಕ ತಜ್ಞರು, ಚುನಾವಣಾ ತಜ್ಞರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷದ ಸದಸ್ಯರೊಂದಿಗೆ ಸಮಾಲೋಚನೆ ಅಗತ್ಯ" ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಮತ್ತು ಈ ವಿಷಯದ ಬಗ್ಗೆ ಶ್ವೇತಪತ್ರವನ್ನು ನೀಡುವಂತೆ ಸರ್ಕಾರವನ್ನು ಕೇಳಿಕೊಂಡರು.