ಹಿಂದಿ ಹೇರಿಕೆಯನ್ನು ದಕ್ಷಿಣ ರಾಜ್ಯಗಳು ಖಂಡಿತಾ ಒಪ್ಪುವುದಿಲ್ಲ: ರಜನಿಕಾಂತ್
ದಕ್ಷಿಣ ಭಾರತದಲ್ಲಿ ಕೇವಲ ತಮಿಳುನಾಡು ಮಾತ್ರವಲ್ಲ, ದಕ್ಷಿಣದ ಯಾವುದೇ ರಾಜ್ಯಗಳು ಹಿಂದಿ ಹೇರುವುದನ್ನು ಒಪ್ಪುವುದಿಲ್ಲ ಎಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಚೆನೈ: ಭಾರತದಲ್ಲಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಸಾಂಸ್ಕೃತಿಕವಾಗಿ ಒಗ್ಗೂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೆ ನೀಡಿರುವ ವಿವಾದದ ನಡುವೆಯೇ ಹಿರಿಯ ನಟ ಮತ್ತು ರಾಜಕಾರಣಿ ರಜನಿಕಾಂತ್ ಬುಧವಾರ ದಕ್ಷಿಣದ ಭಾರತದ ಯಾವುದೇ ರಾಜ್ಯಗಳು ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಕ್ಷಿಣ ಭಾರತದಲ್ಲಿ ಕೇವಲ ತಮಿಳುನಾಡು ಮಾತ್ರವಲ್ಲ, ದಕ್ಷಿಣದ ಯಾವುದೇ ರಾಜ್ಯಗಳು ಹಿಂದಿ ಹೇರುವುದನ್ನು ಒಪ್ಪುವುದಿಲ್ಲ. ಹಿಂದಿ ಮಾತ್ರವಲ್ಲ, ಯಾವುದೇ ಭಾಷೆಯನ್ನೂ ಹೇರಬಾರದು, ಯಾವುದೇ ಭಾಷೆಯನ್ನು ಏಕ ಭಾಷೆ ಎಂಬ ಪರಿಕಲ್ಪನೆಯಲ್ಲಿ ಹೇರಿಕೆ ಮಾಡುವುದು ಸರಿಯಲ್ಲ" ಎಂದು ನುಡಿದರು.
ಆದಾಗ್ಯೂ, ದೇಶಾದ್ಯಂತ ಒಂದು ಸಾಮಾನ್ಯ ಭಾಷೆ ಇದ್ದಲ್ಲಿ ದೇಶದ ಏಕತೆ ಮತ್ತು ಪ್ರಗತಿಗೆ ಒಳ್ಳೆಯದು ಎಂದೂ ಸಹ ರಜನಿಕಾಂತ್ ಅಭಿಪ್ರಾಯಪಟ್ಟರು.
ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅವರು, ಒಂದು ದೇಶ, ಒಂದು ಭಾಷೆ ಎಂಬ ಹೇಳಿಕೆ ನೀಡಿದರು. ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಟ ರಾಜಕಾರಾಣಿ ಕಮಲ್ ಹಾಸನ್ ಸೇರಿದಂತೆ ಅನೇಕ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.