`ನಮಗೆ ಪ್ರಚಾರಮಂತ್ರಿಬೇಕಿಲ್ಲ, ಪ್ರಧಾನಮಂತ್ರಿ ಬೇಕು`: ಅಖಿಲೇಶ್ ಯಾದವ್
ಸಮಾಜವಾದಿ ಪಕ್ಷ (ಎಸ್ಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಮೈತ್ರಿಕೂಟವು ಕೇವಲ `ಮೈತ್ರಿ` ಅಲ್ಲ.
ಹರ್ದೊಯ್: 'ನಮಗೆ ಪ್ರಚಾರಮಂತ್ರಿ ಬೇಕಿಲ್ಲ, ಬದಲಿಗೆ ಪ್ರಧಾನಮಂತ್ರಿ ಬೇಕು' ಎನ್ನುವ ಮೂಲಕ ಸಮಾಜವಾದಿ(ಎಸ್ಪಿ) ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹರ್ದೊಯ್ ಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಖಿಲೇಶ್, ನಾವು ದೇಶಕ್ಕೆ ಓರ್ವ ಉತ್ತಮ ಪ್ರಧಾನಿಯನ್ನು ನೀಡಲು ಸಾಧ್ಯವಿಲ್ಲ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದವರು ಹೇಳುತ್ತಾರೆ. ಅಗತ್ಯತೆ ಇದ್ದಾಗಲೆಲ್ಲಾ ಮಹಾ ಮೈತ್ರಿ ಮೂಲಕ ಬಲವಾದ ಮತ್ತು ಖ್ಯಾತ ಪ್ರಧಾನಿಗಳನ್ನು ದೇಶಕ್ಕೆ ನೀಡಲಾಗಿದೆ ಎಂಬುದನ್ನು ನೆನಪಿಸಲು ನಾನು ಬಯಸುತ್ತೇನೆ. 'ನಮಗೆ ಪ್ರಚಾರಮಂತ್ರಿಬೇಕಿಲ್ಲ, ಪ್ರಧಾನಮಂತ್ರಿ ಬೇಕು' ಎಂದರು.
ಸಮಾಜವಾದಿ ಪಕ್ಷ (ಎಸ್ಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಮೈತ್ರಿಕೂಟವು ಕೇವಲ "ಮೈತ್ರಿ" ಅಲ್ಲ. ದೇಶದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಇದು ಕಾರ್ಯನಿರ್ವಹಿಸುತ್ತಿದೆ ಎಂದು ಅಖಿಲೇಶ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಮಹಾಘಟಬಂಧನ್ ಬಡವರಿಗಾಗಿ, ಗ್ರಾಮೀಣ ಜನತೆಗಾಗಿ. ಯಾರು ಹಲವಾರು ವರ್ಷಗಳಿಂದ ಮುನ್ನೆಲೆಗೆ ಬರಲು ಸಾಧ್ಯವಾಗುತ್ತಿಲ್ಲವೋ ಅವರಿಗಾಗಿ ಈ ಮೈತ್ರಿಕೂಟ. ಭೂಮಿಯಲ್ಲಿ ದುಡಿಯುವ ರೈತರಿಗಾಗಿ, ಕಷ್ಟಪಟ್ಟು ಬೆವರು ಸುರಿಸಿ ದುಡಿಯುತ್ತಿರುವವರಿಗಾಗಿ ನಾವು ಮಹಾಘಟಬಂಧನ್ ನಲ್ಲಿ ಸೇರಿದ್ದೇವೆ ಎಂದು ಅಖಿಲೇಶ್ ಹೇಳಿದರು.