ಭಾರತದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್
ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಸ್ಪೈಸ್ ಜೆಟ್, ಇಂದು ದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟವನ್ನು ಆರಂಭಿಸಿದೆ.
ನವದೆಹಲಿ: ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಸ್ಪೈಸ್ ಜೆಟ್, ಇಂದು ದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟವನ್ನು ಆರಂಭಿಸಿದೆ.
ಭಾಗಶಃ ಜೈವಿಕ ಇಂಧನ ಬಳಸಿದ 78 ಆಸನಗಳನ್ನು ಹೊಂದಿರುವ ಬೊಂಬ್ರಾಯ್ಡರ್ Q400 ವಿಮಾನ ಆಗಸ್ಟ್ 27 ರಂದು ಡೆಹರಾಡುನ್'ನಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಚರಿಸಿ ಯಶಸ್ವಿಯಾಗಿದೆ.
ಶೇ.75 ವಾಯುಯಾನ ಟರ್ಬೈನ್ ಇಂಧನ ಮತ್ತು ಶೇ.25ರಷ್ಟು ಜೈವಿಕ ಇಂಧನ ಬಳಸಿ ಡೆಹ್ರಾಡೂನ್'ನ ಸಿಎಸ್ಐಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (ಐಐಪಿ) ಸಂಸ್ಥೆ ಈ ವಿಮಾನವನ್ನು ಅಭಿವೃದ್ಧಿಪಡಿಸಿದೆ.
ಸುಮಾರು 25 ನಿಮಿಷಗಳ ಪರೀಕ್ಷಾ ಹಾರಾಟದಲ್ಲಿ ವಾಯುಯಾನ ನಿಯಂತ್ರಕ ಡಿ.ಜಿ.ಸಿ.ಎ ಮತ್ತು ಸ್ಪೈಸ್ ಜೆಟ್ನ ಅಧಿಕಾರಿಗಳು ಸೇರಿದಂತೆ ಸುಮಾರು 20 ಮಂದಿ ಭಾಗಿಯಾಗಿದ್ದರು. ಈ ವಿಮಾನ ನವದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುರೇಶ್ ಪ್ರಭು, ಧರ್ಮೇಂದ್ರ ಪ್ರಧಾನ್, ಡಾ. ಹರ್ಷವರ್ಧನ್ ಮತ್ತು ಜಯಂತ್ ಸಿನ್ಹಾ ಹಾಜರಿದ್ದರು.