69 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದ ಶ್ರೀಲಂಕಾ
ಈ ವರ್ಷದಲ್ಲಿ ತಮಿಳುನಾಡು ಮತ್ತು ಪಾಂಡಿಚೇರಿಯ ಒಟ್ಟು 89 ಮೀನುಗಾರರನ್ನು ಶ್ರೀಲಂಕಾ ಬಿಡುಗಡೆಗೊಳಿಸಿದೆ.
ನವ ದೆಹಲಿ : ಜಾಫ್ನಾ ಮತ್ತು ವಾವುನಿಯಾದಲ್ಲಿನ ಲಂಕೆಯ ನ್ಯಾಯಾಲಯ ಅಲ್ಲಿನ ಜೈಲುಗಳಲ್ಲಿರುವ ತಮಿಳುನಾಡಿನ ಸುಮಾರು 69 ಬೆಸ್ತರ ಬಿಡುಗಡೆಗೆ ಆದೇಶ ಹೊರಡಿಸಿದೆ.
ವಿವಿಧ ಸಂದರ್ಭಗಳಲ್ಲಿ ಲಂಕೆಯ ಅಂತಾರಾಷ್ಟ್ರೀಯ ಸಾಗರಿಕ ಗಡಿಯನ್ನು ದಾಟಿ ಅಕ್ರಮವಾಗಿ ಒಳಪ್ರವೇಶಿಸಿದ ಆರೋಪದ ಮೇಲೆ ಲಂಕೆಯ ನೌಕಾ ಪಡೆಯು ಈ ಬೆಸ್ತರನ್ನು ಬಂಧಿಸಿತ್ತು.
ಇವರ ಬಿಡುಗಡೆಯ ಆದೇಶವನ್ನು ಅನುಸರಿಸಿ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಬಂಧಮುಕ್ತ ಬೆಸ್ತರನ್ನು ಮರಳಿ ದೇಶಕ್ಕೆ ಕರೆತರಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಶ್ರೀಲಂಕಾ ನ್ಯಾಯಾಲಯವು ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಬಂಧಿಸಿದ್ದ 20 ಮೀನುಗಾರರನ್ನು ಬಿಡುಗಡೆಗೊಳಿಸಿತ್ತು.
ಅಲ್ಲಿಗೆ ಈ ವರ್ಷದಲ್ಲಿ ತಮಿಳುನಾಡು ಮತ್ತು ಪಾಂಡಿಚೇರಿಯ ಒಟ್ಟು 89 ಮೀನುಗಾರರನ್ನು ಶ್ರೀಲಂಕಾ ಬಿಡುಗಡೆಗೊಳಿಸಿದ್ದು, ಇನ್ನೂ 71 ಮೀನುಗಾರರು ಶ್ರೀಲಂಕಾದ ವಿವಿಧ ಜೈಲುಗಳಲ್ಲಿ ಬಂಧಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.