ನವದೆಹಲಿ: ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರ ಸೇರಿದ ದೇವರಲ್ಲ. ಇಡೀ ವಿಶ್ವಕ್ಕೇ ಸೇರಿದವನು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಅಯೋಧ್ಯೆ ರಾಮಮಂದಿರ ಮತ್ತು ಬಾಬರಿ ಮಸೀದಿ ಸ್ಥಳ ವಿವಾದ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 10ಕ್ಕೆ ಮುಂದೂಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಫಾರೂಕ್ ಅಬ್ದುಲ್ಲಾ ಅವರು, ಅಯೋಧ್ಯೆಯ ರಾಮಮಂದಿರ ನಿರ್ಮಾಣ ವಿವಾದ ರಾಜಕೀಯ ರೂಪ ತಾಳುತ್ತಿದ್ದೆ. ಹೀಗಾಗಿ ಈ ಪ್ರಕರಣವನ್ನು ಮಾತುಕತೆ ಮೂಲಕವೇ ಬಗೆಹರಿಸುವುದು ಒಳ್ಳೆಯದು. ನ್ಯಾಯಾಲಯವರೆಗೆ ತೆಗೆದುಕೊಂಡು ಹೋಗಬಾರದು ಎಂದು ಹೇಳಿದ್ದಾರೆ.


ಮುಂದುವರೆದು ಮಾತನಾಡಿರುವ ಅವರು, ಯಾರೂ ಕೂಡ ರಾಮನ ವಿರುದ್ಧ ಇಲ್ಲ. ಅಷ್ಟಕ್ಕೂ ರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ, ವಿಶ್ವಕ್ಕೇ ದೇವರು. ಹಾಗಾಗಿ ಅಯೋಧ್ಯೆ ವಿಚಾರ ಶೀಘ್ರವಾಗಿ ಬಗೆಹರಿಯಬೇಕಾಗಿದೆ. ಒಂದುವೇಳೆ ಅಲ್ಲಿ ರಾಮಮಂದಿರ ನಿರ್ಮಾಣವಾಗುವುದಾದರೆ ನಾನು ಕೂಡ ಹೋಗಿ ಶಂಕುಸ್ಥಾಪನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.



ಅ.29ರಂದು ಪ್ರಕರಣದ ತ್ವರಿತವಿಚಾರಣೆಗೆ ನಿರಾಕರಿಸಿದ್ದ ಕೋರ್ಟ್ ವಿಚಾರಣೆಯನ್ನು ಜನವರಿ 4ಕ್ಕೆ ಮುಂದೂಡಿತ್ತು. ವಿವಾದ ಸಂಬಂಧದ ವಿಚಾರಣೆ ಜನವರಿಗೆ ಮುಂದೂಡಲ್ಪಟ್ಟ ಬೆನ್ನಲ್ಲೇ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ಕೇಂದ್ರದ ಮೇಲೆ ಒತ್ತಡಗಳು ಹೆಚ್ಚಾಗುತ್ತಾ ಬಂದಿದ್ದವು. ಅಲ್ಲದೆ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನು ಜಾರಿ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದವು. ಈ ವಿಚಾರ ಬಿಜೆಪಿ ಹಾಗೂ ಶಿವಸೇನೆ ನಡುವೆ ವಾಕ್ಸಮರಕ್ಕೆ ಸಹ ಕಾರಣವಾಗಿತ್ತು. ಈ ಬೆನ್ನಲ್ಲೇ ಇಂದು ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದದ ವಿಚಾರಣೆಯನ್ನು ಮತ್ತೆ ಜನವರಿ 10ಕ್ಕೆ ಮುಂದೂಡಿದೆ.