ಶ್ರೀ ಶಿವಕುಮಾರ ಸ್ವಾಮೀಜಿ ನನ್ನನ್ನು ಮಗನಂತೆ ಕಾಣುತ್ತಿದ್ದರು: ಪ್ರಧಾನಿ ಮೋದಿ
ಪ್ರವಾಸಿ ಭಾರತ್ ದಿನದ ಅಂಗವಾಗಿ ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಸಂತಾಪ ಸೂಚಿಸಿದರು.
ವಾರಣಾಸಿ: ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ನನ್ನನ್ನು ಮಗನಂತೆ ಕಾಣುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರವಾಸಿ ಭಾರತ್ ದಿನದ ಅಂಗವಾಗಿ ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನಕ್ಕೆ ಸಂತಾಪ ಸೂಚಿಸಿದರು. ಬಳಿಕ ಮಾತನಾಡುತ್ತಾ, ನಾನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಅವರನ್ನು ಭೇಟಿಯಾಗುವ ಅವಕಾಶ ದೊರಕಿತ್ತು. ಅವರು ನನ್ನನ್ನು ಮಗನಂತೆ ಕಾಣುತ್ತಿದ್ದರು ಮತ್ತು ಅವರ ಆಶೀರ್ವಾದವನ್ನು ಪಡೆದಿದ್ದೆ. ಮಾನವರ ಕಲ್ಯಾಣಕ್ಕಾಗಿ ಅವರು ಶ್ರಮಿಸಿದ್ದಾರೆ. ಅವರೊಬ್ಬ ಮಹಾನ್ ಸಂತ. ಅವರ ನಿಧನದಿಂದ ಬಹಳ ದುಃಖವಾಗಿದೆ ಎಂದು ಮೋದಿ ಹೇಳಿದರು.
ಅನಂತದೆಡೆಗೆ ಸಾಗಿದ ನಡೆದಾಡುವ ದೇವರು: ಸಂಜೆ 4:30ರ ಬಳಿಕ ಕ್ರಿಯಾಸಮಾಧಿ
ಕರ್ನಾಟಕದ ಪ್ರಸಿದ್ಧ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ನಿಧನದ ವಿಷಯ ತಿಳಿಯುತ್ತಿದ್ದಂತೆಯೇ ಸರಣಿ ಟ್ವೀಟ್ ಮಾಡುವ ಮೂಲಕ ಸೋಮವಾರ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳು ಜನರಿಗೋಸ್ಕರ ಅದರಲ್ಲೂ ವಿಶೇಷವಾಗಿ ಬಡವರು ಮತ್ತು ನಿರ್ಗತಿಕರಿಗಾಗಿ ಬದುಕಿದವರು. ಬಡತನ, ಹಸಿವು, ಸಾಮಾಜಿಕ ಅನ್ಯಾಯಗಳಂತಹ ಪಿಡುಗುಗಳನ್ನು ನಿರ್ಮೂಲನ ಮಾಡಲು ಶ್ರೀಗಳು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದು ಮೋದಿ ಶ್ರೀಗಳ ಕಾರ್ಯವನ್ನು ನೆನೆದಿದ್ದರು.
ಶ್ರೀಗಳು ಬಡತನ, ಹಸಿವು, ಸಾಮಾಜಿಕ ಅನ್ಯಾಯಗಳ ನಿರ್ಮೂಲನೆಗೆ ಬದುಕನ್ನೇ ಮುಡಿಪಾಗಿಟ್ಟಿದ್ದರು: ಪ್ರಧಾನಿ ಮೋದಿ
ನಡೆದಾಡುವ ದೇವರು ಎಂದೇ ಕರೆಸಿಕೊಳ್ಳುವ ತುಮಕೂರು ಸಿದ್ಧಗಂಗಾ ಮಠದ 111 ವರ್ಷದ ಶತಾಯುಷಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಿಗ್ಗೆ 11.45ಕ್ಕೆ ಶಿವೈಕ್ಯರಾದರು. ಶ್ರೀ ಮಠವು ಯಾವುದೋ ಒಂದು ಜಾತಿಗೆ, ಪಂಥಕ್ಕೆ ಅಥವಾ ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದ ಪರಮಪೂಜ್ಯರು ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿದವರಾಗಿದ್ದರು.