ಅಖಿಲ ಭಾರತ ಯುವ ಕಾಂಗ್ರೆಸ್ನ ಮಧ್ಯಂತರ ಅಧ್ಯಕ್ಷರಾಗಿ ಕನ್ನಡಿಗ ಶ್ರೀನಿವಾಸ್.ಬಿ.ವಿ. ನೇಮಕ
ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್.ಬಿ.ವಿ. ಅವರಿಗೆ ಸಂಘಟನೆಯ ಮಧ್ಯಂತರ ಅಧ್ಯಕ್ಷರಾಗಿ ಬಡ್ತಿ.
ನವದೆಹಲಿ: ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿದ್ದ ಕರ್ನಾಟದ ಭದ್ರಾವತಿಯವರಾದ ಶ್ರೀನಿವಾಸ್.ಬಿ.ವಿ. ಅವರಿಗೆ ಸಂಘಟನೆಯ ಮಧ್ಯಂತರ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕೇಶವ್ ಚಂದ್ ಆವರು 2019ರ ಲೋಕಸಭಾ ಚುನಾವಣೆ ಸೋಲಿನ ಹೊಣೆ ಹೊತ್ತು ಹುದ್ದೆ ತ್ಯಜಿಸಿದ್ದರು. ಯಾದವ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ವರ್ಷದ ಹಿಂದೆ ಯುವ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ಶ್ರೀನಿವಾಸ್.ಬಿ.ವಿ. ಆಯ್ಕೆಯಾಗಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಶ್ರೀನಿವಾಸ್ ಬಿ.ವಿ.ಅವರನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಮಧ್ಯಂತರ ಅಧ್ಯಕ್ಷರನ್ನಾಗಿ ಎಐಸಿಸಿ ಅಧ್ಯಕ್ಷರು ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀನಿವಾಸ.ಬಿ.ವಿ. ಈ ಹಿಂದೆ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ ಉಸ್ತುವಾರಿಯನ್ನು ವಹಿಸಿದ್ದರು.