ನವದೆಹಲಿ: ಅಮೆರಿಕಾದ ಕಾನ್ಸನ್ ನಗರದ ರೆಸ್ಟೋರೆಂಟ್'ವೊಂದರಲ್ಲಿ ಭಾರತದ ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. 


COMMERCIAL BREAK
SCROLL TO CONTINUE READING

ಮೃತ ವಿದ್ಯಾರ್ಥಿಯನ್ನು ತೆಲಂಗಾಣದ ವಾರಂಗಲ್ ಮೂಲದ ಶರತ್ ಕೊಪ್ಪು(26) ಎಂದು ಗುರುತಿಸಲಾಗಿದ್ದು, ಮಿಸೌರಿ ಯುನಿವರ್ಸಿಟಿಯಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಓದಿನ ಜೊತೆ ಜೇಸ್ ಫಿಶ್ ಅಂಡ್ ಚಿಕನ್ ಮಾರ್ಕೆಟ್ ರೆಸ್ಟೋರೆಂಟ್'ನಲ್ಲಿ ಕೆಲಸ ಮಾಡುತ್ತಿದ್ದರು. ಎಂಜಿನಿಯರಿಂಗ್ ಪದವಿ ಬಳಿಕ ಹೈದ್ರಾಬಾದ್'​ನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಶರತ್, ಇದೇ ವರ್ಷ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ್ದರು ಎನ್ನಲಾಗಿದೆ.  


ರೆಸ್ಟೋರೆಂಟ್'ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶರತ್ ಮೇಲೆ ಶುಕ್ರವಾರ ರಾತ್ರಿ 7 ಗಂಟೆ ಸಮಯದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆದಿದ್ದು, ಫೈರಿಂಗ್​ನಿಂದ ಗಂಭೀರವಾಗಿ ಗಾಯಗೊಂಡಿದ್ದ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದ ಶರತ್ ಕೊನೆಯುಸಿರೆಳೆದಿದ್ದಾರೆ ಎಂದು ಸ್ನೇಹಿತರು ಹೈದ್ರಾಬಾದ್​ನಲ್ಲಿರುವ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. 


ಆರೋಪಿಯನ್ನು ದರೋಡೆಕೋರ ಎಂದು ಶಂಕಿಸಿರುವ ಪೊಲೀಸರು, ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಕನ್ಸಾಸ್ ಪೊಲೀಸರು ಟ್ವೀಟ್ ಮಾಡಿದ್ದಾರೆ. 



ಸದ್ಯ ಬಿಎಸ್​ಎನ್​ಎಲ್​ನಲ್ಲಿ ಕೆಲಸ ಮಾಡುತ್ತಿರುವ ಶರತ್ ತಂದೆ ರಾಮ್ ಮೋಹತ್ ಮಗನ ಮೃತದೇಹವನ್ನು ಭಾರತಕ್ಕೆ ತರಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರಿಗೆ ಮನವಿ ಮಾಡಿದ್ದಾರೆ. ಕಳೆದ ವರ್ಷ ಹೈದ್ರಾಬಾದ್ ಮೂಲದ ಟೆಕ್ಕಿಯೋರ್ವನನ್ನು ಜನಾಂಗೀಯ ದ್ವೇಷದಿಂದ ಕನ್ಸಾಸ್ ನಗರದ ಬಾರ್'ನಲ್ಲಿ ಹತ್ಯೆ ಮಾಡಲಾಗಿತ್ತು.