ಜಮ್ಮ-ಕಾಶ್ಮೀರಕ್ಕೆ ಭೇಟಿ ನೀಡಲು ಗುಲಾಮ್ ನಬಿ ಆಜಾದ್ಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್
ಶ್ರೀನಗರ, ಅನಂತ್‌ನಾಗ್, ಬಾರಾಮುಲ್ಲಾ ಮತ್ತು ಜಮ್ಮುಗೆ ಭೇಟಿ ನೀಡಲು ಆಜಾದ್ ಅವರಿಗೆ ಉನ್ನತ ನ್ಯಾಯಾಲಯ ಅನುಮತಿ ನೀಡಿದೆ.
ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರನ್ನು ತವರು ರಾಜ್ಯಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ಗ್ರೀನ್ ಸಿಗ್ನಲ್ ನೀಡಿದೆ.
ಈ ಪ್ರದೇಶದ ಜನರ ಅನುಕೂಲಕ್ಕಾಗಿ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ಶ್ರೀನಗರ, ಅನಂತ್‌ನಾಗ್, ಬಾರಾಮುಲ್ಲಾ ಮತ್ತು ಜಮ್ಮುಗೆ ಭೇಟಿ ನೀಡಲು ಆಜಾದ್ ಅವರಿಗೆ ಉನ್ನತ ನ್ಯಾಯಾಲಯ ಅನುಮತಿ ನೀಡಿದೆ.
"ಜಮ್ಮು ಮತ್ತು ಕಾಶ್ಮೀರ ಭೇಟಿಯ ಸಮಯದಲ್ಲಿ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಉದ್ದೇಶ ಹೊಂದಿಲ್ಲ" ಎಂದು ಅಜಾದ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ಬಳಿಕ ನ್ಯಾಯಾಲಯ ಅನುಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ದೃಷ್ಟಿಯಿಂದ ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ ನೀಡಿಲ್ಲ.
ಇದೇ ವೇಳೆ, ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯವು ಸಾಮಾನ್ಯ ಸ್ಥಿತಿಗೆ ಮರಳಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ತಿಳಿಸಿದೆ. ಅಲ್ಲದೆ, ಈ ಪ್ರದೇಶದ ನಿವಾಸಿಗಳು ನ್ಯಾಯಾಲಯಗಳನ್ನು ತಲುಪಲು ಸಹ ಸಾಧ್ಯವಿದೆಯೇ ಎಂಬ ಬಗ್ಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಕೇಳಿದೆ.
ಇದನ್ನು "ಗಂಭೀರ ವಿಷಯ" ಎಂದು ಪರಿಗಣಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ವೈಯಕ್ತಿಕವಾಗಿ ಚರ್ಚಿಸುವುದಾಗಿ ಹೇಳಿದ್ದಾರೆ.