ನವದೆಹಲಿ: ವಿವಾದಿತ ರಾಮಜನ್ಮ ಭೂಮಿ ಪ್ರಕರಣ ಕುರಿತಂತೆ ಎಲ್ಲ ಪಕ್ಷಗಳು ಅಕ್ಟೋಬರ್ 18 ರೊಳಗೆ ತಮ್ಮ ವಾದಗಳನ್ನು ಪೂರ್ಣಗೊಳಿಸಿ ಎಂದು ಬುಧವಾರ (ಸೆಪ್ಟೆಂಬರ್ 18) ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ರಾಮಜನ್ಮ ಭೂಮಿ ಪ್ರಕರಣ ಸಂಬಂಧ ಅಕ್ಟೋಬರ್​ 18ರೊಳಗೆ ವಾದ-ಪ್ರತಿವಾದ ಅಂತ್ಯಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್ ನೇತೃತ್ವದ ಪೀಠ ಗಡುವು ನೀಡಿದೆ.


COMMERCIAL BREAK
SCROLL TO CONTINUE READING

ಆಗಸ್ಟ್ 6 ರಿಂದ ಅಯೋಧ್ಯೆ ಪ್ರಕರಣವನ್ನು ಪ್ರತಿದಿನ ವಿಚಾರಣೆ ನಡೆಸುತ್ತಿರುವ ಸಿಜೆಐ ನೇತೃತ್ವದ ಪಂಚ ಸದಸ್ಯ ಪೀಠ ವಿಚಾರಣೆಯ 26 ನೇ ದಿನವಾದ ಇಂದು(ಸೆಪ್ಟೆಂಬರ್ 18) ವಿಚಾರಣೆಗೆ ಅಕ್ಟೋಬರ್ 18ರ ಗಡುವು ನೀಡಿದ್ದಾರೆ.


ಒಂದೊಮ್ಮೆ ಅರ್ಜಿದಾರರು ಮಧ್ಯಸ್ಥಿಕೆ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಬಯಸಿದರೆ ಅದಕ್ಕೂ ಅವಕಾಶವಿದೆ. ಆದಾಗ್ಯೂ, ಅ.18ರೊಳಗೆ ವಿಚಾರಣೆ ಪೂರ್ಣಗೊಳ್ಳಬೇಕಿರುವುದರಿಂದ ಅಗತ್ಯವಿದ್ದರೆ, ಪ್ರತಿದಿನ ಮತ್ತು ಪ್ರತಿ ಶನಿವಾರ ಒಂದು ಗಂಟೆ ಹೆಚ್ಚುವರಿ ವಿಚಾರಣೆ ನಡೆಸಲೂ ಸಿದ್ಧ. ಆದರೆ ವಿಚಾರಣೆ ನಿಲ್ಲುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್ ತಿಳಿಸಿದ್ದಾರೆ.


ಬಾಬರಿ ಮಸೀದಿ-ರಾಮ್ ಮಂದಿರ ಮಧ್ಯಸ್ಥಿಕೆ ಪ್ರಕ್ರಿಯೆಯು ಬಹಳ ದೂರ ಸಾಗಿದೆ. ವಿಚಾರಣೆ ಅಂತಿಮ ಘಟ್ಟ ತಲುಪಿದೆ ಎಂದು ಗಮನ ಸೆಳೆದ ಸುಪ್ರೀಂ ಕೋರ್ಟ್, ಅಕ್ಟೋಬರ್ 18 ರೊಳಗೆ ಎರಡು ಪಕ್ಷಗಳ ನಡುವೆ ಮಧ್ಯಸ್ಥಿಕೆ ಕುರಿತು ಏನಾದರೂ ಮಾತುಕತೆ ನಡೆದರೆ ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.  ಪ್ರಕರಣದ ನಡಾವಳಿಗಳ ಗೌಪ್ಯತೆ ಕಾಪಾಡಲಾಗಿದೆ. ಮಧ್ಯಸ್ಥಿಕೆಗೆ ಸಂಬಂಧಿಸಿದಂತೆ ಕೂಡ ಗೌಪ್ಯತೆ ಕಾದುಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.


ಮಂಗಳವಾರ (ಸೆಪ್ಟೆಂಬರ್ 17), ಅಯೋಧ್ಯೆ ಪ್ರಕರಣದ ವಿಚಾರಣೆ ಕುರಿತಂತೆ ಎಲ್ಲಾ ಪಕ್ಷಗಳಿಗೆ ವಾದಗಳನ್ನು ಮುಕ್ತಾಯಗೊಳಿಸಲು ಅಂತಿಮ ದಿನಾಂಕವನ್ನು ನಿಗದಿಪಡಿಸುವಂತೆ ಐದು ಸದಸ್ಯರ ಸಾಂವಿಧಾನಿಕ ಪೀಠವು ಕೇಳಿಕೊಂಡಿತ್ತು.


ಮುಖ್ಯ ನ್ಯಾಯಮೂರ್ತಿಗಳ ನಿರ್ದೇಶನದ ಹಿನ್ನೆಲೆಯಲ್ಲಿ, ಎಲ್ಲಾ ಪಕ್ಷಗಳು ಬುಧವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾದಗಳಿಗೆ ಸಮಯವನ್ನು ನೀಡಿದ್ದವು. ಮುಂದಿನ ಎರಡು ದಿನಗಳಲ್ಲಿ ಪ್ರತಿಕ್ರಿಯೆ ನೀಡುವುದಾಗಿ ರಾಮ್‌ಲಾಲಾ ಪರ ವಕೀಲರು ಹೇಳಿದರೆ, ನಿರ್ಮೋಹಿ ಅಖರಾ ಯಾವುದೇ ಟೈಮ್‌ಲೈನ್ ಅನ್ನು ಪ್ರಸ್ತುತಪಡಿಸಿಲ್ಲ. ಇತರ ಪಕ್ಷಗಳು ತಮ್ಮ ವಾದ ಮಂಡಿಸಿದ 1.5 ದಿನಗಳಲ್ಲಿ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿವೆ. ಮುಂದಿನ ವಾರದ ಅಂತ್ಯದ ವೇಳೆಗೆ (ಸೆಪ್ಟೆಂಬರ್ 29) ಪೂರ್ಣಗೊಳಿಸುವುದಾಗಿ ಸುನ್ನಿ ವಕ್ಫ್ ಮಂಡಳಿ ತಿಳಿಸಿದೆ.


ಈ ಕುರಿತು ಎಲ್ಲಾ ಪಕ್ಷಗಳು ತಮ್ಮ ವಾದಗಳನ್ನು ಅಕ್ಟೋಬರ್ 18 ರೊಳಗೆ ಪೂರ್ಣಗೊಳಿಸಬೇಕು ಎಂದು ಸಿಜೆಐ ಹೇಳಿದೆ. ಸಮಯ ಕಡಿಮೆಯಾಗಿದ್ದರೆ, ನಾವು ಪ್ರತಿದಿನ ಅಥವಾ ಶನಿವಾರದಂದು ಹೆಚ್ಚುವರಿ 1 ಗಂಟೆ ಪ್ರಕರಣವನ್ನು ಆಲಿಸಬಹುದು ಎಂದು ಅವರು ಸೂಚಿಸಿದರು. ಈ ವಿಚಾರಣೆಯು ಅಕ್ಟೋಬರ್ 18 ರಂದು ಕೊನೆಗೊಳ್ಳುತ್ತದೆ ಎಂದು ನಾವು ಒಟ್ಟಾಗಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಈ ರೀತಿಯಾಗಿ, ಅಕ್ಟೋಬರ್ 18 ರೊಳಗೆ ವಿಚಾರಣೆ ಪೂರ್ಣಗೊಂಡರೆ, ನವೆಂಬರ್ 17 ರಂದು, ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ನಿವೃತ್ತಿಯಾಗುವ ಮೊದಲು ಸುಪ್ರೀಂ ಕೋರ್ಟಿಗೆ ತೀರ್ಪು ನೀಡಲು ಒಂದು ತಿಂಗಳ ಸಮಯ ಸಿಗಲಿದೆ.