ಸರ್ವೋಚ್ಛ ನ್ಯಾಯಾಲಯವು ಐತಿಹಾಸಿಕ ತೀರ್ಪೊಂದನ್ನು ನೀಡಿದೆ. "ಭಾರತೀಯ ಜೈಲುಗಳಲ್ಲಿ ಜಾತಿಯಾಧಾರಿತ ತಾರತಮ್ಯ ಸಹಿಸೋದಿಲ್ಲ" ಎಂದು ಆದೇಶಿಸಿದೆ. ಸಮಾನತೆ ಸಾರುವ ಸಂವಿಧಾನ ಅನುಷ್ಠಾನಕ್ಕೆ ಬಂದು ಏಳು ದಶಕಗಳು ಕಳೆದ ಮೇಲೆ ಇಂತಹದೊಂದು ತೀರ್ಪು ಬಂದಿದ್ದಕ್ಕೆ ಸಂಕಟ ಪಡಬೇಕೋ ಇಲ್ಲಾ ಈಗಲಾದರೂ ಸರಿಪಡಿಸಲಾಯ್ತಲ್ಲಾ ಎಂದು ಸಂಭ್ರಮಿಸಬೇಕೋ ಗೊತ್ತಿಲ್ಲ.


COMMERCIAL BREAK
SCROLL TO CONTINUE READING

ಇಷ್ಟು ವರ್ಷಗಳಾದರೂ ಕಾರಾಗ್ರಹಗಳ ಕೈಪಿಡಿಯಲ್ಲಿ ಅದು ಹೇಗೆ ಜಾತಿಬೇಧದ ತಾರತಮ್ಯ ಅಸ್ತಿತ್ವದಲ್ಲಿತ್ತು ಎಂಬುದೇ ಅಚ್ಚರಿಯ ಸಂಗತಿ. ಜೈಲು ಎನ್ನುವುದೇ ಹೊರಗಿನ ಪ್ರಪಂಚಕ್ಕೆ ಅತೀತವಾಗಿರುವಾಗ ಬಂಧಿಖಾನೆಯ ಒಳಗೆ ಏನೆಲ್ಲಾ ತಾರತಮ್ಯ ಇರುತ್ತದೆಂಬುದನ್ನು ಅಲ್ಲಿದ್ದು ಬಂದವರೇ ಹೇಳಬೇಕಷ್ಟೇ. ಜೈಲಿನಲ್ಲಿ ವರ್ಗ ತಾರತಮ್ಯ ಇರುವುದು ಗೊತ್ತಿದೆ. ಮೇಲ್ವರ್ಗದವರು ಹಣವಂತರು ಜೈಲೊಳಗೆ ಬೇಕಾದ ಸವಲತ್ತುಗಳನ್ನು ಪಡೆಯುತ್ತಾರೆ ಎಂಬುದೂ ಗೊತ್ತಿದೆ. ಆದರೆ ಜಾತಿ ನೋಡಿ ಕೆಲಸ ಹಂಚಲಾಗುತ್ತಿದೆ ಎಂಬುದು ಪ್ರಮುಖ ಸುದ್ದಿಯಾಗಿರಲಿಲ್ಲ. ಯಾಕೆಂದರೆ ಕೆಲವು ಜೈಲುಗಳ ಮಾರ್ಗದರ್ಶಿ ಕೈಪಿಡಿಯಲ್ಲೇ ಈ ಜಾತಿಯಾಧಾರಿತ ಕೆಲಸದ ಹಂಚಿಕೆ ಇರುವುದರಿಂದ ಜಾತಿ ತಾರತಮ್ಯದ ವಿರುದ್ಧ ಪ್ರಶ್ನಿಸುವ ಅವಕಾಶವೂ ಕೆಳಜಾತಿ ವರ್ಗದವರಿಗೆ ಇರಲಿಲ್ಲ. ಕೆಲವರು ಜೈಲಾಧಿಕಾರಿಗಳನ್ನು ಪ್ರಶ್ನಿಸಿದರೂ ಕೈಪಿಡಿ ತೋರಿಸಿ ಬಾಯಿ ಮುಚ್ಚಿಸಲಾಗುತ್ತಿತ್ತು.


ಜೈಲಲ್ಲಿರುವ ಕೈದಿಗಳನ್ನು ಜಾತಿಯಾಧಾರಿತವಾಗಿ ವರ್ಗೀಕರಣ ಮಾಡಲಾಗುತ್ತಿತ್ತು. ಜಾತಿಯಾಧಾರಿತವಾಗಿ ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಜಾತಿಯ ಮಾನದಂಡವನ್ನು ಆಧರಿಸಿಯೆ ಕೆಲಸಗಳ ಹಂಚಿಕೆಯೂ ನಡೆಯುತ್ತಿತ್ತು. ಮೇಲ್ಜಾತಿ ಮೇಲ್ವರ್ಗದಿಂದ ಬಂದ ಕೈದಿಗಳಿಗೆ ಅಡುಗೆಗೆ ಸಂಬಂಧಿಸಿದ ಕೆಲಸಗಳನ್ನು ಕೊಡುವುದು ಹಾಗೂ ಕೆಳಜಾತಿವರ್ಗದಿಂದ ಬಂದ ಖೈದಿಗಳಿಗೆ ಟೈಲೆಟ್ ಬಾತ್ರೂಂ ಸ್ವಚ್ಚತೆಗೆ ನೇಮಿಸುವುದು ಜೈಲುಗಳಲ್ಲಿ ಸರ್ವೇಸಾಮಾನ್ಯ ಪ್ರಕ್ರಿಯೆಯಾಗಿದೆ.


ಅದರಲ್ಲೂ ಮೋದಿ ಸರಕಾರ 2014 ರಿಂದ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ನಂತರ ಜೈಲಿನೊಳಗಿನ ರೂಢಿಗತ ಜಾತಿ ತಾರತಮ್ಯಕ್ಕೆ ನಿಯಮಗಳ ರೂಪವನ್ನು ಕೊಡಲಾಯಿತು. 2016 ರಲ್ಲಿ ಕೇಂದ್ರ ಸರಕಾರವು ಜಾರಿಗೆ ತಂದ ಕೈಪಿಡಿಯಲ್ಲಿ ಕೈದಿಗಳನ್ನು ಜಾತಿಯ ಮಾನದಂಡದ ಮೇಲೆ ವರ್ಗೀಕರಿಸಿ, ಜಾತಿಯ ಆಧಾರದಲ್ಲಿ ಬಂಧಿಖಾನೆಯ ಕೆಲಸಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. "2016 ರ ಕೈಪಿಡಿಯೇ ಲೋಪದಿಂದ ಕೂಡಿದ್ದು ಅಸಂವಿಧಾನಕವಾಗಿದೆ" ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್ 4 ರಂದು ಕೊಟ್ಟ ತೀರ್ಪಿನಲ್ಲಿ ಹೇಳಿದೆ.‌


ದೇಶದ ಕೆಲವು ರಾಜ್ಯಗಳ ಕಾರಾಗ್ರಹ ಕೈಪಿಡಿಗಳು ಜಾತಿಯಾಧಾರಿತ ತಾರತಮ್ಯಕ್ಕೆ ಕಾರಣವಾಗಿವೆ ಎಂದು ಆರೋಪಿಸಿ ಮಹಾರಾಷ್ಟ್ರದ ಕಲ್ಯಾಣ್ ನಿವಾಸಿ ಸುಕನ್ಯಾ ಶಾಂತಾರವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮಾಡಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಅತ್ಯಂತ ಮಹತ್ವದ ತೀರ್ಪನ್ನು ಕೊಟ್ಟಿದೆ. 


"ಜೈಲಿನಲ್ಲಿ ಅಸ್ಪೃಶ್ಯತೆ ಆಚರಿಸುವುದು ಹಾಗೂ ಜಾತಿ ತಾರತಮ್ಯ ಮಾಡುವುದು ಸಂವಿಧಾನದ 15 ನೇ ನಿಯಮದ ಉಲ್ಲಂಘನೆಯಾಗಿದೆ. ಯಾವುದೇ ವರ್ಗವು ಕೀಳು ದರ್ಜೆಯ ಕೆಲಸ ಮಾಡುವುದಕ್ಕೆ ಹುಟ್ಟಿರುವುದಿಲ್ಲ. ಕೈದಿಗಳನ್ನು ಜಾತಿಯಾಧಾರದಲ್ಲಿ ಅಡುಗೆ ಮಾಡುವ ಹಾಗೂ ಅಡುಗೆ ಮಾಡದ ವರ್ಗವಾಗಿ ಬೇರ್ಪಡಿಸುವುದು ಅಸ್ಪೃಶ್ಯತೆಯ ಆಚರಣೆಯಾಗಿದೆ" ಎಂದು ಆದೇಶಿಸಿದ ಸರ್ವೋಚ್ಚ ನ್ಯಾಯಾಲಯವು ಜೈಲು ಕೈಪಿಡಿಯಲ್ಲಿರುವ ಜಾತಿಯಾಧಾರಿತ ನಿಬಂಧನೆಗಳನ್ನು ರದ್ದುಗೊಳಿಸಿತು. 'ಮೂರು ತಿಂಗಳಿನ ಒಳಗೆ ಜೈಲು ಕೈಪಿಡಿಗಳಲ್ಲಿ ತಿದ್ದುಪಡಿ ಮಾಡುವಂತೆ ಹತ್ತು ರಾಜ್ಯಗಳಿಗೆ ನಿರ್ದೇಶನವನ್ನೂ ನೀಡಿತು. 


ಸುಪ್ರೀಂ ನ್ಯಾಯಪೀಠದ ಆದೇಶದ ಮೂರು ಮುಖ್ಯ ತೀರ್ಮಾನಗಳು ಹೀಗಿವೆ.


* ಜೈಲಿನಲ್ಲಿರುವವರೂ ಘನತೆಯಿಂದ ಬದುಕುವ ಹಕ್ಕು ಹೊಂದಿರುವರು.


* ಕೈದಿಗಳನ್ನು ಅಮಾನವೀಯವಾಗಿ ನಡೆಸಿಕೊಂಡರೆ ಅಯಾ ರಾಜ್ಯಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.


* ಶೌಚಾಲಯದ ಗುಂಡಿ, ಒಳಚರಂಡಿ ಸ್ವಚ್ಚಗೊಳಿಸುವಂತಹ ಅಪಾಯಕಾರಿ ಕೆಲಸಗಳನ್ನು ಕೈದಿಗಳಿಗೆ ವಹಿಸುವಂತಿಲ್ಲ. 


* ಜಾತಿಯಾಧಾರಿತವಾಗಿ ಕೈದಿಗಳಿಗೆ ಕೆಲಸಗಳನ್ನು ಹಂಚುವಂತಿಲ್ಲ. 


ಜೈಲೊಳಗೆ ಜಾತಿಯಾಧಾರಿತ ತಾರತಮ್ಯದ ವಿರುದ್ಧ ನ್ಯಾಯಾಲಯವು ತೆಗೆದುಕೊಂಡ ತೀರ್ಮಾನಗಳು ಸ್ವಾಗತಾರ್ಹ. ಆದರೆ ಜಾತಿವ್ಯವಸ್ಥೆಯೇ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟು ದೇಶಾದ್ಯಂತ ತನ್ನ ಅಮಾನವೀಯ ಟೊಂಗೆ ಟಿಸುಳುಗಳನ್ನು ಚಾಚಿರುವಾಗ, ಮೇಲ್ಜಾತಿ ಪರವಾದ ನಿಲುವುಗಳನ್ನೇ ಆಳುವ ಸರಕಾರ ಪ್ರೋತ್ಸಾಹಿಸುತ್ತಿರುವಾಗ, ಜೈಲು ನಿಯಂತ್ರಕ ಅಧಿಕಾರಿಗಳು ಹಾಗೂ ನೌಕರರು  ಮೇಲ್ಜಾತಿ ಪ್ರೀತಿ ಹಾಗೂ ಕೆಳಜಾತಿ ದ್ವೇಷದ ಧೋರಣೆಯನ್ನು ಬೆಳೆಸಿಕೊಂಡಿರುವಾಗ ಸುಪ್ರೀಂ ಕೋರ್ಟಿನ ಈ ಸಾಂವಿಧಾನಿಕ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತವಾ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ. 


ಜೈಲು ಕೈಪಿಡಿಯಲ್ಲಿರುವ ನಿಯಮಗಳೇ ಉಲ್ಲಂಘನೆಯಾಗುತ್ತಲೇ ಇವೆ.  ಹಣಬಲ ಪ್ರಭಾವ ಇದ್ದವರಿಗೆ ಸಕಲ ಸವಲತ್ತುಗಳೂ ಕಾರಾಗ್ರಹದಲ್ಲಿ ದೊರೆಯುತ್ತಲೇ ಇವೆ, ನಿಷೇಧಿತ ಡ್ರಗ್ಸ್, ವೆಪನ್ಸ್, ಮೊಬೈಲುಗಳ ಬಳಕೆ ಅನಿಯಂತ್ರಿತವಾಗಿ ಮುಂದುವರೆದಿವೆ. ಬೇಲಿಕಾಯುವವರ ಕಣ್ಗಾವಲಿನಲ್ಲೇ ಕಾನೂನು ಪಾಲನೆ ನಗಣ್ಯವಾಗಿರುವಾಗ ಜಾತಿ ತಾರತಮ್ಯ ಆಗದಂತೆ ನೋಡಿಕೊಳ್ಳಲು ಸಾಧ್ಯವೇ? ಕೈಪಿಡಿಯಲ್ಲಿ ಏನೇ ಇರಲಿ ಬಿಡಲಿ ಬಂಧಿಖಾನೆಯಲ್ಲಿ ಸುಧಾರಣೆ ಹಾಗೂ ತಾರತಮ್ಯ ನಿರ್ಮೂಲನೆ ಕಷ್ಟಸಾಧ್ಯವಾದ ಸಂಗತಿಯಾಗಿದೆ. 


ಅಸ್ಪೃಶ್ಯ ವರ್ಗದ ಕೈದಿಗಳನ್ನು ಅಡುಗೆ ಕೆಲಸಕ್ಕೆ ನೇಮಕ ಮಾಡಿದ್ದೇ ಆದರೆ ಮೇಲ್ಜಾತಿ ವರ್ಗದ ಖೈದಿಗಳು ಊಟವನ್ನೇ ಬಹಿಷ್ಕರಿಸುತ್ತಾರೆ. ಶಾಲೆಗಳಲ್ಲಿ ಬಿಸಿ ಊಟ ಯೋಜನೆಯಲ್ಲೂ ಹೀಗೆಯೇ ಆಗಿತ್ತು. ಕೆಳವರ್ಗದ ಮಹಿಳೆ ಅಡುಗೆ ತಯಾರಿಸಿದ ಕಾರಣಕ್ಕೆ ಸವರ್ಣಿಯರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ಬಿಟ್ಟಿದ್ದರು. ಇದು ನಮ್ಮ ಜಾತಿವ್ಯವಸ್ಥೆ. ಜೈಲೊಳಗೆ ಜಾತಿತಾರತಮ್ಯವನ್ನು ಹೋಗಲಾಡಿಸಲಾಗುವುದು ಎನ್ನುವುದೇ ಭ್ರಮೆ. ಆದರೂ ಕಾರಾಗ್ರಹದಲ್ಲಿ ಕೆಳಜಾತಿ ಜನಾಂಗದ ಕೈದಿಗಳಿಗೂ ಕಾನೂನಿನ ರಕ್ಷಣೆ ಇದೆ ಎಂಬುದೇ ಸಮಾಧಾನಕರ. ಇಂದಿಲ್ಲಾ ನಾಳೆ ಜೈಲೊಳಗಾದರೂ ಜಾತಿ ತಾರತಮ್ಯ ವಿನಾಶವಾದರೆ ಅದೇ ಸಂವಿಧಾನದ ಗೆಲುವು. 


- ಶಶಿಕಾಂತ ಯಡಹಳ್ಳಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.