ಇವಿಎಂ ಜೊತೆ ಶೇ.100 ವಿವಿಪ್ಯಾಟ್ ಹೊಂದಾಣಿಕೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಇವಿಎಂ ಮತಗಳ ಜೊತೆಗೆ ಶೇ.100 ವಿವಿಪ್ಯಾಟ್ ಹೊಂದಾಣಿಕೆ ಕೋರಿ ತಂತ್ರಜ್ಞರ ತಂಡವೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ರಜಾ ಕಾಲದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ನವದೆಹಲಿ: ಲೋಕಸಭಾ ಚುನಾವಣೆ 2019ರ ಮತ ಎಣಿಕೆ ಸಮಯದಲ್ಲಿ ಇವಿಎಂ ಮತಗಳ ಜೊತೆಗೆ ಶೇ.100 ವಿವಿಪ್ಯಾಟ್ ಹೊಂದಾಣಿಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಇವಿಎಂ ಮತಗಳ ಜೊತೆಗೆ ಶೇ.100 ವಿವಿಪ್ಯಾಟ್ ಹೊಂದಾಣಿಕೆ ಕೋರಿ ತಂತ್ರಜ್ಞರ ತಂಡವೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ರಜಾ ಕಾಲದ ಪೀಠ ಅರ್ಜಿಯನ್ನು ತಿರಸ್ಕರಿಸಿದ್ದು, "ಜನರ ಆಯ್ಕೆಯನ್ನು ಅನುಮಾನಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.
ಈ ಮೊದಲು ಲೋಕಸಭಾ ಚುನಾವಣೆ ಫಲಿತಾಂಶದ ವೇಳೆ ಶೇ. 50ರಷ್ಟು ವಿವಿಪ್ಯಾಟ್ ಸ್ಲಿಪ್ ಗಳನ್ನು ತಾಳೆ ನೋಡುವಂತೆ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಪ್ರಸ್ತುತ ಶೇ.5ರಷ್ಟು ವಿವಿಪ್ಯಾಟ್ ಗಳನ್ನೂ ಇವಿಎಂ ಜೊತೆಗೆ ತಾಳೆ ನೋಡಲಾಗುತ್ತಿದೆ. ಹೀಗಾಗಿಯೇ ಫಲಿತಾಂಶ ತಡವಾಗಬಹುದು. ವಿವಿಪ್ಯಾಟ್ ಪ್ರತಿಗಳನ್ನು ಶೇ. 50 ರವರೆಗೆ ಹೆಚ್ಚಿಸಿದ್ದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಗೆ ಆರು ದಿನ ತಡವಾಗಲಿದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.