ರಫೇಲ್ : ರಾಹುಲ್ಗೆ ಸುಪ್ರೀಂ ನೋಟೀಸ್
ಕಳೆದ ವಾರ ರಾಹುಲ್ ಗಾಂಧಿಯ ವಿರುದ್ಧ ಮೀನಾಕ್ಷಿ ಲೆಖಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ನವದೆಹಲಿ: ರಫೇಲ್ ಜೆಟ್ ಪ್ರಕರಣದಲ್ಲಿ ತನ್ನ ಆದೇಶವನ್ನು ತಪ್ಪಾಗಿ ಉಲ್ಲೇಖಿಸಿರುವುದಕ್ಕೆ ಎಪ್ರಿಲ್ 22ರ ಒಳಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೋಟೀಸ್ ಜಾರಿ ಮಾಡಿದೆ.
ರಫೇಲ್ ಫೈಟರ್ ಜೆಟ್ ಒಪ್ಪಂದ ಪ್ರಕರಣದಲ್ಲಿ ಚೌಕೀದಾರ್ ಮೋದಿ `ಚೋರ್' ಆಗಿದ್ದಾರೆಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ನೀಡಿರುವ ಹೇಳಿಕೆ ಕುರಿತಂತೆ ಕಳೆದ ವಾರ ಅವರ ವಿರುದ್ಧ ಮೀನಾಕ್ಷಿ ಲೆಖಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂಕೋರ್ಟ್ ಆದೇಶ ಎಂದು ಬಿಂಬಿಸಲು ಯತ್ನಿಸಿದ್ದಾರೆ. ರಾಹುಲ್ ಅವರ ಭಾಷೆ, ಅವರು ಬಳಸಿರುವ ಪದಗಳು ಬೇರೆ ಅರ್ಥವೇ ನೀಡುವಂತಿವೆ ಎಂದು ಅರ್ಜಿದಾರರಾದ ಮೀನಾಕ್ಷಿ ಲೇಖಿ ಆರೋಪಿಸಿದ್ದರು.
ಇಂದು ಮೀನಾಕ್ಷಿ ಲೇಖಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ರಾಹುಲ್ ಗಾಂಧಿಗೆ ನೋಟೀಸ್ ನೀಡಿದ್ದು, ಎಪ್ರಿಲ್ 22ರೊಳಗೆ ಪ್ರತಿಕ್ರಿಯಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಆದೇಶಿಸಿದೆ.