ಇವಿಎಂ ವಿವಾದ; ಮಾರ್ಚ್ 25ರೊಳಗೆ ಉತ್ತರಿಸುವಂತೆ ಚು.ಆಯೋಗಕ್ಕೆ ಸುಪ್ರೀಂ ನೋಟಿಸ್
ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಶೇ.50ರಷ್ಟು ವಿಪಿಪ್ಯಾಟ್ ಸ್ಲಿಪ್ ಗಳ ಎಣಿಕೆ ಮಾಡುವಂತೆ ವಿರೋಧ ಪಕ್ಷಗಳು ಮನವಿ ಮಾಡಿವೆ.
ನವದೆಹಲಿ: ವಿದ್ಯುನ್ಮಾನ ಮತಯಂತ್ರ ಬಳಕೆ ವಿರೋಧಿಸಿ ವಿಪಕ್ಷಗಳು ಸಲ್ಲಿಸಿರುವ ಅರ್ಜಿಗಳ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ವಿವಿಪ್ಯಾಟ್ ಬಳಕೆ ಕುರಿತಂತೆ ಎದ್ದಿರುವ ಪ್ರಶ್ನೆಗಳಿಗೆ ಮಾರ್ಚ್ 25ರೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್, ಕೆ.ಸಿ ವೇಣುಗೋಪಾಲ್, ಶರದ್ ಪವಾರ್, ಅರವಿಂದ್ ಕೇಜ್ರಿವಾಲ್ ಮತ್ತು ಸತೀಶ್ ಚಂದ್ರ ಮಿಶ್ರಾ ಸೇರಿದಂತೆ ಪ್ರತಿಪಕ್ಷದ 21 ನಾಯಕರು ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಿಸುವ ಮುನ್ನ ಪ್ರತಿಯೊಂದು ಕ್ಷೇತ್ರ ವಿದ್ಯುನ್ಮಾನ ಮತಯಂತ್ರಗಳ ಶೇ.50ರಷ್ಟು ವಿಪಿಪ್ಯಾಟ್ ಸ್ಲಿಪ್ ಗಳ ಎಣಿಕೆ ಮಾಡುವಂತೆ ವಿರೋಧ ಪಕ್ಷಗಳ ನಾಯಕರು ಮನವಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ದೀಪಕ್ ಗುಪ್ತಾ ಹಾಗೂ ನ್ಯಾ. ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠವು ವಿಪಕ್ಷ ನಾಯಕರ ಮನವಿಯ ವಿಚಾರಣೆಯನ್ನು ಮಾರ್ಚ್ 25ಕ್ಕೆ ನಿಗದಿ ಮಾಡಿದೆ. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ ನೆರವಾಗುವುದಕ್ಕಾಗಿ ಓರ್ವ ಹಿರಿಯ ಅಧಿಕಾರಿಯನ್ನು ಮಾರ್ಚ್ 25ರಂದು ನಡೆಯಲಿರುವ ವಿಚಾರಣೆ ಸಮಯದಲ್ಲಿ ಕಳುಹಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಆದೇಶ ನೀಡಿದೆ.