ನವದೆಹಲಿ: ಮೆದುಳು ಜ್ವರದಿಂದ 160ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಸುಪ್ರೀಂ ಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಯಾದ ಬೆನ್ನಲ್ಲೇ ಈ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ, ಬಿಹಾರ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ನೊಟೀಸ್‌ ಜಾರಿ ಮಾಡಿದ್ದು, ಒಂದು ವಾರದೊಳಗೆ ಮಕ್ಕಳ ಸಾವಿನ ಕುರಿತಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಮೆದುಳು ಜ್ವರ(ಎನ್ಸೆಫಾಲಿಟಿಸ್ ಸಿಂಡ್ರೋಮ್ -ಎಇಎಸ್)ದಿಂದ ಸಾಯುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಈ ಬಗ್ಗೆ ಬಿಹಾರ ಸರ್ಕಾರ ನಿರ್ಲಕ್ಷಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ವೈದ್ಯಕೀಯ ಸೇವೆಗೆ ತಜ್ಞರ ತಂಡವನ್ನು ರಚಿಸಿ ಬಿಹಾರದ ಮುಜಾಫರಪುರಕ್ಕೆ ಕಳುಹಿಸಬೇಕೆಂದು ಮನವಿ ಮಾಡಲಾದ ಪಿಐಎಲ್ ಸಲ್ಲಿಕೆಯಾದ ಬಳಿಕ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.


ಅಷ್ಟೇ ಅಲ್ಲದೆ, 100 ಮೊಬೈಲ್ ಐಸಿಯು ಘಟಕಗಳನ್ನು ಚಿಕಿತ್ಸೆಗಾಗಿ ಸಿದ್ಧಪಡಿಸಿ ಬಿಹಾರದ ಮೆದುಳುಜ್ವರ ಪೀಡಿತ ಮಕ್ಕಳಿರುವ ಪ್ರದೇಶಗಳಲ್ಲಿ ನಿಯೋಜಿಸಬೇಕು. ಎಇಎಸ್ ವಿರುದ್ಧ ಹೋರಾಡಲು ಯುಪಿ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡಬೇಕು. ಬಿಹಾರ, ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಮೆದುಳು ಜ್ವರದ ಬಗ್ಗೆ ಎಲ್ಲಾ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳನ್ನು ಆರಂಭಿಸಬೇಕು. ಜೊತೆಗೆ ಮೃತ ಮಕ್ಕಳ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.


ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿದ್ದ ಪೀಠ ಕೇಂದ್ರ, ಬಿಹಾರ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು 10 ದಿನಗಳ ಬಳಿಕ ನಡೆಸಲಾಗುವುದು ಎಂದು ಹೇಳಿದೆ.