ನವದೆಹಲಿ: ಬಡ ವಿದ್ಯಾರ್ಥಿಗಳ ಪೋಷಕರನ್ನು ಸುಲಿಯುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕುಕೃತ್ಯಕ್ಕೆ ತಡೆ ನೀಡಲೆಂಬ ಸುದುದ್ದೇಶದಿಂದ ಜಾರಿಗೆ ತರಲಾಗಿರುವ ಶಿಕ್ಷಣ ಹಕ್ಕು ಕಾಯ್ದೆ ಅಡಿ‌ಗೆ ತಿದ್ದುಪಡಿ ಮಾಡಲೊರಟಿರುವ ರಾಜ್ಯ ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಶಿಕ್ಷಣ ಹಕ್ಕು ಕಾಯ್ದೆಗೆ 'ಬಡ ವಿದ್ಯಾರ್ಥಿಗಳಿಗೆ ಶೇಕಡ 25ರಷ್ಟು ಸೀಟುಗಳನ್ನು ನೀಡಲೇಬೇಕಿರುವ ನಿಯಮದಿಂದ ಖಾಸಗಿ ಮತ್ತು ಅನುದಾನರಹಿತ ಶಾಲೆಗಳನ್ನು ಹೊರಗಿರಿಸುವಂತಹ' ತಿದ್ದುಪಡಿ ತರಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ಪಾಲಕರ ಸಂಘವು ರಾಜ್ಯ ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು. 


ಹೈಕೋರ್ಟ್ ಸರ್ಕಾರದ ನಡೆಗೆ ತಡೆ ನೀಡಲು ನಿರಾಕರಿಸಿತು‌‌‌. ಅದರಿಂದಾಗಿ ಕಳೆದ ಮೇ ತಿಂಗಳು ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶ ತಡೆ ಪ್ರಶ್ನಿಸಿ ಪಾಲಕರ ಸಂಘವು ಯೋಗಾನಂದ ಎಂಬುವವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. 


ಸೋಮವಾರ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠವು ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯ ಸರ್ಕಾರಕ್ಕೆ ಪಾಲಕರ‌ ದೂರಿನ ಬಗ್ಗೆ‌ ಪ್ರತಿಕ್ರಿಯೆ ನೀಡುವಂತೆ ನೊಟೀಸ್ ನೀಡಿತು.


ಅಷ್ಟೇಯಲ್ಲದೆ ರಾಜ್ಯ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ನಿಯಮಾವಳಿಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿತು. ಯೋಗಾನಂದ ನೇತೃತ್ವದಲ್ಲಿ ಪಾಲಕರ ಸಂಘ ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಸಿಂಧುತ್ವ ಪ್ರಶ್ನಿಸಿ ಮೇಲ್ಮನವಿ ಪರವಾಗಿ ಮೀನಾಕ್ಷಿ ಅರೋರಾ ವಾದ ಮಂಡಿಸಿದರು.