ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ನಡೆಸಲು ಅನುಮತಿ ಕೋರಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. 


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆಗೆ ಕೊಲ್ಕತ್ತಾ ಹೈಕೋರ್ಟ್​ ಅನುಮತಿ ನೀಡದ ಕಾರಣ, ಅನುಮತಿ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ಅರ್ಜಿಯ ಶೀಘ್ರ ವಿಚಾರಣೆ ಮಾಡುವಂತೆ ಬಿಜೆಪಿ ಮನವಿ ಮಾಡಿತ್ತು. ಆದರೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಸಾಮಾನ್ಯ ಅರ್ಜಿಗಳೊಂದಿಗೆ ಜನವರಿ 2 ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.


ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಯಾತ್ರೆ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿತ್ತು. ಅದರಂತೆ ಪಶ್ಚಿಮ ಬಂಗಾಳದ ಮೂರು ಪ್ರದೇಶಗಳಿಂದ ರಥಯಾತ್ರೆಯನ್ನು ಆರಂಭಿಸಿ ಕೋಲ್ಕತ್ತಾದಲ್ಲಿ ಮುಕ್ತಾಯಗೊಳ್ಳುವಂತೆ ಬಿಜೆಪಿ ಯೋಜನೆ ರೂಪಿಸಿತ್ತು. ಆದರೆ, ಯಾತ್ರೆ ನಡೆದರೆ ರಾಜ್ಯದಲ್ಲಿ ಕೋಮುಗಲಭೆಗಳು ಉಂಟಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ  ಮಮತಾ ಬ್ಯಾನರ್ಜಿ ಸರ್ಕಾರ ರಥ ಯಾತ್ರೆಗೆ ಅನುಮತಿ ನಿರಾಕರಿಸಿತ್ತು.


ಈ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಕೋಲ್ಕತ್ತಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಕಳೆದ ಗುರುವಾರ ಕೋರ್ಟ್​ನ ಏಕಸದಸ್ಯ ಪೀಠ ಯಾತ್ರೆ ನಡೆಸಲು ಷರತ್ತು ಬದ್ಧ ಒಪ್ಪಿಗೆ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ವಿಭಾಗೀಯ ಪೀಠ ರಥಯಾತ್ರೆಗೆ ಅನುಮತಿ ನೀಡಿದ್ದ ಆದೇಶವನ್ನು ವಜಾಗೊಳಿಸಿತ್ತು.