ಅಯೋಧ್ಯೆ ವಿವಾದ: ಮಾರ್ಚ್ 5ಕ್ಕೆ ಸುಪ್ರೀಂ ಆದೇಶ
ಇದು ಖಾಸಗಿ ಆಸ್ತಿಯ ಪರಭಾರೆ ವಿಷಯವಲ್ಲ. ಮಧ್ಯಸ್ಥಿಕೆ ಮಾತುಕತೆ ಮೂಲಕ ಪಾಲುದಾರರು ಪರಿಹಾರ ಕಂಡುಕೊಳ್ಳುವ ಶೇ1ರಷ್ಟು ಅವಕಾಶ ಸಿಕ್ಕರೂ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪ್ರಕರಣದ ವಿಚಾರಣೆಯ ಸ್ವರೂಪ ಹಾಗೂ ದಿನಾಂಕವನ್ನು ಮಾರ್ಚ್ 5 ರಂದು ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಇಂದು ರಾಮಜನ್ಮಭೂಮಿ ಆಸ್ತಿ ಹಕ್ಕು ವಿಚಾರಣೆಗೆ ಸಂಬಂಧಿಸಿದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪಂಚ ಸದಸ್ಯ ಪೀಠ, ಇದು ಖಾಸಗಿ ಆಸ್ತಿಯ ಪರಭಾರೆ ವಿಷಯವಲ್ಲ. ಮಧ್ಯಸ್ಥಿಕೆ ಮಾತುಕತೆ ಮೂಲಕ ಪಾಲುದಾರರು ಪರಿಹಾರ ಕಂಡುಕೊಳ್ಳುವ ಶೇ1ರಷ್ಟು ಅವಕಾಶ ಸಿಕ್ಕರೂ ನೀಡಬೇಕಾಗುತ್ತದೆ. ಪ್ರಕರಣವನ್ನು ಕೋರ್ಟ್ ನಿರ್ವಹಣೆಯ ಮಧ್ಯಸ್ಥಿತಿಗೆ ಕಳುಹಿಸಿದ್ದಲ್ಲಿ ಸಮಯವೂ ಉಳಿತಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ನ ಸಿಜೆಐ ರಂಜನ್ ಗೊಗಯ್ ಸೇರಿ ನ್ಯಾ. ಎಸ್ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ ಇಂದು ಮೇಲ್ವನವಿಗಳ ವಿಚಾರಣೆ ನಡೆಸಿತು.
2010 ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ 14 ಮೇಲ್ಮನವಿಗಳು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದೆ. ಈ ಹಿಂದೆ ಹೈಕೋರ್ಟ್ ಅಯೋಧ್ಯೆ ವಿವಾದ ವಿಚಾರವಾಗಿ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಲ್ಲಾ ಹೀಗೆ ಭಾಗಗಳಾಗಿ ವಿಂಗಡಿಸಿತ್ತು. ಈಗ ತೀರ್ಪನ್ನು ಪ್ರಶ್ನಿಸಿ ಹಲವರು ಸುಪ್ರೀಂಗೆ ಮೊರೆ ಹೋಗಿರುವುದರಿಂದ ಸರ್ವೋಚ್ಚ ನ್ಯಾಯಾಲಯ ಅಂತೀಮ ತೀರ್ಪನ್ನು ನೀಡಬೇಕಾಗಿದೆ.