ನವದೆಹಲಿ: ರಫೇಲ್​ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅಕ್ರಮವಾಗಿದ್ದು ನ್ಯಾಯಾಲಯ ಉಸ್ತುವಾರಿಯಲ್ಲಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ಸುಪ್ರೀಂಕೋರ್ಟ್​ ವಜಾಗೊಳಿಸಿದ್ದು, ಒಪ್ಪಂದ ಸಂಬಂಧ ಯಾವುದೇ ತನಿಖೆ ಅಗತ್ಯವಿಲ್ಲ ಎಂದು ತೀರ್ಪು ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ತ್ರಿಸದಸ್ಯ ಪೀಠದಿಂದ ಈ ತೀರ್ಪು ಹೊರಬಿದ್ದಿದ್ದು, ಫ್ರೆಂಚ್​ ಡಸಾಲ್ಟ್​ ಏವಿಯೇಶನ್​ ಕಂಪನಿಯಿಂದ 36 ರಫೇಲ್​ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ತೃಪ್ತಿಕರವಾಗಿದೆ. ಏರ್​ಕ್ರಾಫ್ಟ್​ ಖರೀದಿ ವಿಚಾರದಲ್ಲಿ ನ್ಯಾಯಾಲಯ ಮೇಲ್ಮನವಿ ಪ್ರಾಧಿಕಾರದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದೆ. 


ವಕೀಲ ಎಂ.ಎಲ್.ಶರ್ಮಾ ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದ ಸಂಬಂಧ ಮೊದಲು ಪ್ರಕರಣ ದಾಖಲಿಸಿದ್ದು, ನಂತರ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ನಾ, ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ದೂರು ಸಲ್ಲಿಸಿದ್ದರು. ರಫೇಲ್ ಡೀಲ್ ಕುರಿತಂತೆ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ನ.14ರಂದು ತೀರ್ಪು ಕಾಯ್ದಿರಿಸಿತ್ತು. ಇದೀಗ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ತ್ರಿಸದಸ್ಯ ಪೀಠದಿಂದ ತೀರ್ಪು ಪ್ರಕಟಗೊಂಡಿದೆ. ಇದರಿಂದ ಕೇಂದ್ರದ ಆಡಳಿತಾರೂಢ ಪ್ರಧಾನಿ ಮೋದಿ ಸರ್ಕಾರಕ್ಕೆ ನಿರಾಳಗೊಂಡಂತಾಗಿದೆ. 


ರಫೇಲ್ ಡೀಲ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಮುಖಾಂಶಗಳು:


  • ಏರ್​ಕ್ರಾಫ್ಟ್​ ಖರೀದಿ ವಿಚಾರದಲ್ಲಿ ನ್ಯಾಯಾಲಯ ಮೇಲ್ಮನವಿ ಪ್ರಾಧಿಕಾರದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸರಿಯಾದ ಕ್ರಮವಲ್ಲ.

  • ಬೆಲೆ ನಿರ್ಧಾರ ಮಾರಾಟಗಾರರಿಗೆ ಬಿಟ್ಟ ವಿಚಾರವೇ ಹೊರತು ಸರ್ಕಾರದ ತೀರ್ಮಾನವಾಗಿರುವುದಿಲ್ಲ.

  • ಎಲ್ಲಾ ರಕ್ಷಣಾ ಒಪ್ಪಂದಗಳ ವಿಮರ್ಶೆ ಅಸಾಧ್ಯ.

  • ಒಪ್ಪಂದ ಸಂಬಂಧ ಯಾವುದೇ ತನಿಖೆ ಅಗತ್ಯವಿಲ್ಲ.

  • ವಿಮಾನ ಖರೀದಿ ಪ್ರಕ್ರಿಯೆಯು ನಮಗೆ ತೃಪ್ತಿಯನ್ನು ತಂದಿದೆ.

  • ವಾಣಿಜ್ಯ ವ್ಯವಹಾರದಲ್ಲಿ ಪಕ್ಷಪಾತ ಮಾಡಿರುವ ಯಾವುದೇ ಅಂಶ ಕಾಣಿಸುತ್ತಿಲ್ಲ. 

  • 126 ಯುದ್ಧ ವಿಮಾನಗಳಿಗೆ, ಈಗಿನ 36 ವಿಮಾನಗಳ ಖರೀದಿ ಬೆಲೆಯನ್ನು ಹೋಲಿಕೆ ಮಾಡುವುದು ಕೋರ್ಟ್​ನ ಕೆಲಸವಲ್ಲ.