ಮುಂದಿನ ವಿಚಾರಣೆಗೂ ಮೊದಲು ರೋಹಿಂಗ್ಯಾ ಮುಸ್ಲಿಮರ ಗಡಿಪಾರು ಮಾಡುವಂತಿಲ್ಲ ಎಂದ ಸುಪ್ರೀಂ
ಮತ್ತಷ್ಟು ವಿಚಾರಣೆಯ ತನಕ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವಂತಿಲ್ಲ ಎಂದ ಸುಪ್ರೀಂಕೋರ್ಟ್; ಮಾನವ ಹಕ್ಕುಗಳು ಮತ್ತು ರಾಷ್ಟ್ರೀಯ ಭದ್ರತೆಯ ನಡುವಿನ ಸಮತೋಲನ ಇರಬೇಕೆಂದು ಪ್ರತಿಪಾದಿಸಿದ ನ್ಯಾಯಾಲಯ.
ನವ ದೆಹಲಿ: ರೋಹಿಂಗ್ಯಾ ನಿರಾಶ್ರಿತ ಮುಸ್ಲಿಮರನ್ನು ಪ್ರಕರಣದ ಮುಂದಿನ ವಿಚಾರಣೆಗೆ ತನಕ ಗಡೀಪಾರು ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿಕೆ ನೀಡಿದೆ.
ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯುತ್ತರವನ್ನು ಸಲ್ಲಿಸುವಂತೆ ಸಂಬಂಧ ಪಟ್ಟವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ನಂತರ ವಿಚಾರಣೆಯನ್ನು ನವೆಂಬರ್ 21ರ ವರೆಗೆ ಮುಂದೂಡಿದ ನ್ಯಾಯಾಲಯವು, ರೋಹಿಂಗ್ಯಾ ನಿರಾಶ್ರಿತರನ್ನು ಪ್ರಕರಣದ ಮುಂದಿನ ವಿಚಾರಣೆಗೆ ತನಕ ಗಡೀಪಾರು ಮಾಡಬಾರದು ಎಂದು ಆದೇಶ ನೀಡಿದೆ.
ಮುಗ್ಧ ಮಕ್ಕಳು ಮತ್ತು ಮಹಿಳೆಯರ ದುಷ್ಪರಿಣಾಮವನ್ನು ಮರೆತು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದ್ದು, ಮಾನವ ಹಕ್ಕುಗಳು ಮತ್ತು ರಾಷ್ಟ್ರೀಯ ಭದ್ರತೆಯ ನಡುವೆ ಸಮತೋಲನ ಇರಬೇಕೆಂದು ಪ್ರತಿಪಾದಿಸಿದೆ.
ಪ್ರಕರಣವನ್ನು ಮುಂದೂಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯ ಪೀಠವು ಯಾವುದೇ ಆಕಸ್ಮಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದ್ದು, ರೋಹಿಂಗ್ಯ ಮುಸ್ಲಿಮರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿ, ಅವರನ್ನು ಮ್ಯಾನ್ಮಾರ್ಗೆ ಹಿಂದಿರುಗಿಸಲು ಸರ್ಕಾರದ ನಿಲುವನ್ನು ಪ್ರಶ್ನಿಸಿದರು.
ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು ಎಂದು ಕೇಂದ್ರ ಸರ್ಕಾರ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. ಅಲ್ಲದೆ ಗುಪ್ತಚರ ಮಾಹಿತಿಯ ಪ್ರಕಾರ, ರೋಹಿಂಗ್ಯಾ ಮುಸ್ಲಿಮರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಆ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹೈದರಾಬಾದ್ ಹಾಗೂ ಮೇವಾತ್ ನಲ್ಲಿ ಸಕ್ರಿಯವಾಗಿವೆ ಎಂದು ತಿಳಿಸಿತ್ತು.
ವ್ಯಾಪಕವಾದ ತಾರತಮ್ಯ, ಹಿಂಸಾಚಾರ ಮತ್ತು ಸಮುದಾಯದ ವಿರುದ್ಧ ರಕ್ತಪಾತದಿಂದಾಗಿ ಮಯನ್ಮಾರ್ನಿಂದ ತಪ್ಪಿಸಿಕೊಂಡು ಬಂದು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಎರಡು ರೋಹಿಂಗ್ಯಾ ವಲಸಿಗರು ಮನವಿ ಸಲ್ಲಿಸಿದ್ದರು.
ಹಿಂದಿನ ಹಿಂಸಾಚಾರದ ನಂತರ ಭಾರತಕ್ಕೆ ಪಲಾಯನ ಮಾಡಿದ ಹಲವರು ಜಮ್ಮು, ಹೈದರಾಬಾದ್, ಹರಿಯಾಣ, ಉತ್ತರ ಪ್ರದೇಶ, ದೆಹಲಿ-ಎನ್ಸಿಆರ್ ಮತ್ತು ರಾಜಸ್ಥಾನದಲ್ಲಿ ನೆಲೆಸಿದ್ದಾರೆ.